ಪುತ್ತೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ

ಪುತ್ತೂರು: ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ತಾರಿಪಡ್ಪು- ಚೆನ್ನಾವರ ರಸ್ತೆಯನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿ ಎಸ್‌ಡಿಪಿಐ ಪಾಲ್ತಾಡಿ ಗ್ರಾಮ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ತಾರಿಪಡ್ಪುವಿನಿಂದ ಚೆನ್ನಾವರ ಪ್ರದೇಶಕ್ಕೆ ತೆರಳುವ ರಸ್ತೆಯನ್ನು ಡಾಂಬರೀಕರಣಗೊಳಿಸುವ ಉದ್ದೇಶದಿಂದ ಕಳೆದ ಹಲವು ವರ್ಷಗಳ ಹಿಂದೆ ಗುದ್ದಲಿ ಪೂಜೆಯನ್ನು ಮಾಡಲಾಗಿತ್ತು. ಸಂಸದರ ಅನುದಾನದಲ್ಲಿ ಈ ಕಾಮಗಾರಿ ನಡೆಸುತ್ತಿರುವುದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದರು, ರಸ್ತೆ ಡಾಂಬರೀಕರಣಕ್ಕಾಗಿ ಜಲ್ಲಿಯನ್ನು ತಂದು ರಾಶಿ ಹಾಕಲಾಗಿದೆ. ಆದರೆ ಆ ಬಳಿಕ ಇಲ್ಲಿ ಕಾಮಗಾರಿ ನಡೆದಿಲ್ಲ. ಪ್ರತೀ ಬಾರಿ ಚುನಾವಣೆ ಸಂದರ್ಭದಲ್ಲಿ ರಸ್ತೆಗೆ ಜಲ್ಲಿ ತಂದು ರಾಶಿ ಹಾಕುತ್ತಾರೆ ಆದರೆ ಕಾಮಗಾರಿ ನಡೆಸುವುದಿಲ್ಲ ಎಂದು ಪ್ರತಿಭಟನಾ ನೇತೃತ್ವ ವಹಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಧ್ಯಕ್ಷ ಎಂ. ಎ ರಫೀಕ್ ಆರೋಪಿಸಿದರು.
ಇಲ್ಲಿನ ಜನರ ಬಹುದಿನಗಳ ಬೇಡಿಕೆಯನ್ನು ತಕ್ಷಣ ಈಡೇರಿಸಬೇಕು. ಈ ರಸ್ತೆಯ ಮೂಲಕ ಸವಣೂರು , ಪೆರುವಾಜೆ ಮತ್ತು ಬೆಳ್ಳಾರೆಗೆ ಸಂಪರ್ಕ ಇರುವ ಕಾರಣ ರಸ್ತೆಯನ್ನು ನಿರ್ಲಕ್ಷ್ಯ ಮಾಡಬಾರದು. ಸಂಸದರು ತಾವು ಮಾಡಿರುವ ಕಾರ್ಯವನ್ನು ಪೂರ್ತಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯರು ಭಾಗವಹಿಸಿದ್ದರು. ಜಿಪಂ ಇಂಜಿನಿಯರ್ ಗೋವರ್ಧನ್ ಅವರು ಮನವಿಯನ್ನು ಸ್ವೀಕರಿಸಿ ವಿಚಾರವನ್ನು ಮೇಲಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಮನವಿಗೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಎಚ್ಚರಿಸಿದರು.







