ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಸುತ್ತೋಲೆಯಿಂದ ಅನ್ಯಾಯ- ನಝೀರ್ ಮಠ
ಪುತ್ತೂರು: ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ)ಯ ಪ್ರಕಾರ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ರವೇಶ ಪಡೆದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅಂತಿಮ ಕ್ಷಣದಲ್ಲಿ ಬಂದ ಸರ್ಕಾರದ ಸುತ್ತೋಲೆ ಆತಂಕಕಾರಿಯಾಗಿ ಪರಿಣಮಿಸಿದೆ. ಇದರಿಂದ ಬಹುತೇಕ ವಿದ್ಯಾರ್ಥಿಗಳು ಆರ್‌ಟಿಇ ಸೀಟು ಪಡೆಯಲಾಗದೆ ಸಂಕಷ್ಟ ಅನುಭವಿಸಬೇಕಾಗಿ ಬಂದಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ಘಟಕದ ಉಪಾಧ್ಯಕ್ಷ ಎಂ.ಬಿ. ನಝೀರ್ ಮಠ ಅವರು ತಿಳಿಸಿದರು. ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಟಿಇ ಕಾಯಿದೆ ಪ್ರಕಾರ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಶೇ.25ರಷ್ಟು ಸೀಟುಗಳನ್ನು ಆರ್‌ಟಿಇ ಪ್ರಕಾರ ಉಚಿತವಾಗಿ ಮೀಸಲಿಡಬೇಕಾಗಿದೆ. ಈ ಪ್ರಕಾರ ಬಹುತೇಕ ಶಾಲೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಹೆಚ್ಚು ಅರ್ಜಿಗಳು ಬಂದಿದ್ದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳ ವಿವರವನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಬಳಿಕ ಆನ್‌ಲೈನ್‌ನಲ್ಲೇ ದೃಢೀಕರಣ ಪತ್ರವನ್ನೂ ಸರ್ಕಾರದ ಕಡೆಯಿಂದ ನೀಡಲಾಗಿದೆ. ಇಷ್ಟೆಲ್ಲ ಆದ ಮೇಲೆ ವಿದ್ಯಾರ್ಥಿಗಳ ಪೋಷಕರು ಸಂಬಂಧಪಟ್ಟ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಹೋದಾಗ ಆಘಾತಕಾರಿ ಅಂಶ ತಿಳಿದು ಬಂದಿದೆ ಎಂದವರು ತಿಳಿಸಿದರು. ಮೇ 7ರಂದು ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಕಚೇರಿ ಹೊರಡಿಸಿದ ಸುತ್ತೋಲೆಯನ್ನು ಮುಂದಿಟ್ಟುಕೊಂಡು ಕೆಲವು ಮಕ್ಕಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಆರ್‌ಟಿಇ ಮೂಲಕ ಸೀಟು ಪಡೆಯುವ ವಿದ್ಯಾರ್ಥಿಯು ವಾಸಿಸುವ ವಾರ್ಡ್‌ನಲ್ಲಿ ಬೇರೆ ಸರ್ಕಾರಿ ಶಾಲೆ ಇದ್ದಲ್ಲಿ ಅಥವಾ ಅನುದಾನಿತ ಶಾಲೆ ಇದ್ದಲ್ಲಿ ಅಂಥ ವಿದ್ಯಾರ್ಥಿಗಳು ಆರ್‌ಟಿಇ ಮೂಲಕ ಸೀಟು ಪಡೆಯುವಂತಿಲ್ಲ ಎಂದು ಈ ಸುತ್ತೋಲೆ ಹೇಳುತ್ತಿದೆ. ಇದನ್ನು ತೋರಿಸಿ ಕೆಲವು ಖಾಸಗಿ ಆಂಗ್ಲಮಾಧ್ಯಮ ಶಾಲೆಗಳು ಮಕ್ಕಳಿಗೆ ಪ್ರವೇಶ ನಿರಾಕರಿಸುತ್ತಿವೆ ಎಂದು ಅವರು ತಿಳಿಸಿದರು. ಈ ವಿಚಾರವನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ನಾವು ತಂದಾಗ ಈ ಬಗ್ಗೆ ನಾವೇನೂ ಮಾಡುವಂತಿಲ್ಲ. ಸರ್ಕಾರದ ಸುತ್ತೋಲೆಯಾಗಿರುವ ಕಾರಣ ನೀವು ಶಿಕ್ಷಣ ಇಲಾಖೆಯ ಆಯುಕ್ತರಲ್ಲೇ ಮಾತನಾಡಬೇಕಾಗುತ್ತದೆ ಎಂಬ ಉತ್ತರ ನೀಡಿದ್ದಾರೆ ಎಂದು ನಝೀರ್ ಮಠ ಹೇಳಿದರು.
ಸರ್ಕಾರದ ಸುತ್ತೋಲೆಯನ್ನು ತರಿಸಿಕೊಂಡು ನಾವು ಓದಿದ್ದೇವೆ. ಅದರಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಎಂಬ ಹೆಸರುಗಳನ್ನು ದಾಖಲಿಸಿ ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರದ ಶಾಲೆ ಇದ್ದರೆ ಅಂಥ ಮಕ್ಕಳು ಆರ್‌ಟಿಇ ಸೀಟು ಪಡೆಯುವಂತಿಲ್ಲ ಎಂದು ಹೇಳಿದೆ. ಇದರಲ್ಲಿ ಎಲ್ಲೂ ಗ್ರಾಮ ಪಂಚಾಯಿತಿ ಎಂದು ಹೇಳಿಲ್ಲ. ಆದರೆ ಗ್ರಾಮ ಪಂಚಾಯಿತಿ ಮಟ್ಟದ ಶಾಲೆಗಳಲ್ಲೂ ಈ ಸುತ್ತೋಲೆ ಮುಂದಿಟ್ಟು ಪ್ರವೇಶ ನಿರಾಕರಿಸಲಾಗುತ್ತಿದ್ದು, ಇದು ಅನ್ಯಾಯ ಎಂದರು.
ಈಗಾಗಲೇ ಆರ್‌ಟಿಇ ಮೂಲಕ ಸೀಟು ಪಡೆದ ಖುಷಿಯಲ್ಲಿರುವ ಮಕ್ಕಳು ಮತ್ತು ಹೆತ್ತವರಿಗೆ ಈ ಬೆಳವಣಿಗೆ ಆಘಾತ ಉಂಟು ಮಾಡಿದ್ದು, ಈ ಗೊಂದಲವನ್ನು ಇಲಾಖೆ ತಕ್ಷಣ ಬಗೆಹರಿಸಬೇಕು. ಗ್ರಾಪಂ ವ್ಯಾಪ್ತಿಗೆ ಈ ಅಂಶ ಅನ್ವಯ ಆಗುವುದಿಲ್ಲ ಎಂದಾದರೆ ಅದನ್ನು ಸ್ಪಷ್ಟಪಡಿಸಿ ಶಾಲೆಗಳಿಗೆ, ಅಧಿಕಾರಿಗಳಿಗೆ ತಿಳಿಸಬೇಕು. ಒಂದು ವೇಳೆ ಗ್ರಾಪಂಗೂ ಅನ್ವಯ ಆಗುವುದಿದ್ದರೆ ತಕ್ಷಣ ಇದಕ್ಕೆ ತಿದ್ದುಪಡಿ ತಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವಿನಾಯಿತಿ ನೀಡಬೇಕು. ಇಲ್ಲದಿದ್ದರೆ ಸರಕಾರ ಜಾರಿಗೆ ತಂದಿರುವ ಆರ್‌ಟಿಇ ಎಂಬ ಉತ್ತಮ ಕಾಯಿದೆ ಗ್ರಾಮಾಂತರ ಪ್ರದೇಶದ ಬಡವರು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಫಲ ನೀಡುವುದಿಲ್ಲ ಎಂದರು.
ವಕೀಲ ಜಗನ್ನಾಥ ರೈ, ಕಾರ್ಮಿಕ ಘಟಕದ ಸದಸ್ಯ ಸಾದಿಕ್ ಮಠ, ಸಾಮಾಜಿಕ ಕಾರ್ಯಕರ್ತ ಕೆ.ಆದಂ ಕೊಪ್ಪಳ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.







