ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿದ್ಯಾರ್ಥಿಗಳಿಂದ ಅಡಿಕೆಯ ಬಿಳಿಹೊಟ್ಟು ಸುಳಿಯುವ ಯಂತ್ರ ತಯಾರು

ಮಂಗಳೂರು : ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳ ತಂಡ ಅಡಿಕೆಯ ಬಿಳಿಹೊಟ್ಟು ಸುಳಿಯುವ ಯಂತ್ರವೊಂದನ್ನು ಸಿದ್ದಪಡಿಸಿದೆ.
ಸಂಸ್ಥೆಯ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸುದರ್ಶನ್ ಎಸ್., ವೃತನ್ ಕುಮಾರ್, ಧನುಷ್ ಜಿ. , ಪ್ರತೀಕ್ ಆಚಾರ್ಯ ಬಿ.ಕೆ. ಅವರು ತಮ್ಮ ಶೈಕ್ಷಣಿಕ ಪ್ರಾಜೆಕ್ಟ್ ಅಂಗವಾಗಿ ಡಿಸೈನ್ ಆ್ಯಂಡ್ ಫ್ಯಾಬ್ರಿಕೇಶನ್ ಆಫ್ ಅರೆಕನಟ್ ಪೊಲೀಶಿಂಗ್ ಮೆಶಿನ್ ಮಾದರಿಯನ್ನು ಪ್ರೊಫೆಸರ್ ಹರ್ಷ ಜಿ.ಒ. ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದಾರೆ.
ಯಂತ್ರವು 10 ಕೆ.ಜಿ. ಕ್ಷಮತೆಯುಳ್ಳ ಸಿಲಿಂಡರನ್ನು ಹೊಂದಿದ್ದು ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ. ಇದರಲ್ಲಿ 8 ಸ್ಟೀಲ್ ತಂತಿಗಳಿವೆ. 2 ಎಚ್‌ಪಿ ಮೋಟಾರ್ ಅಳವಡಿಸಿದ್ದು, ಸಿಲಿಂಡರ್ ತಿರುಗುತ್ತಿದ್ದಂತೆ ಅಡಿಕೆ ಮತ್ತು ತಂತಿಗೆ ಘರ್ಷಣೆ ಉಂಟಾಗಿ ಬಿಳಿಹೊಟ್ಟು ಸುಳಿಯಲ್ಪಡುತ್ತದೆ. ಯಂತ್ರದ ಸಿಲಿಂಡರ್ ವೇಗ ಮಿತಿ ಹೆಚ್ಚಿಸಲು ರಿಡಕ್ಷನ್ ಗೇಟ್ ಬಾಕ್ಸ್ ಮತ್ತು ಬೆಲ್ಟ್ ಡ್ರೈವನ್ನು ಉಪಯೋಗಿಸಲಾಗಿದೆ. ತ್ಯಾಜ್ಯವಸ್ತುಗಳು ರಂದ್ರದ ಮೂಲಕ ತೆಗೆಯಲ್ಪಡುತ್ತದೆ. ಈ ಪ್ರಕ್ರಿಯೆಗೆ ಬೇಕಾಗುವ ಸಮಯ ಅಡಿಕೆ ಗುಣಮಟ್ಟ ಮತ್ತು ಬಿಳಿಹೊಟ್ಟು ಅಡಿಕೆಗೆ ಅಂಟಿಕೊಂಡಿರುವ ಮೇಲೆ ಅವಲಂಬಿತವಾಗಿದೆ.
ಗಂಟೆಗೆ ಸರಾಸರಿ 10 ಕೆ.ಜಿ. ಅಡಿಕೆ ಹೊಟ್ಟನ್ನು ಬೇರ್ಪಡಿಸುವ ಕ್ಷಮತೆಯ ಈ ಯಂತ್ರಕ್ಕಿದೆ ಎಂದು ಸಂಸ್ಥೆಯ ಪ್ರಮುಖರು ಹಾಗೂ ವಿದ್ಯಾರ್ಥಿಗಳ ತಂಡ ತಿಳಿಸಿದೆ.







