ರಾಜಕೀಯದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ: ದೇವೇಗೌಡ

ಬೆಂಗಳೂರು.ಮೇ.18: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇಂದು 84ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಅವರು ರಾಜಕೀಯದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ನಗರದ ಎಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಅವರು, ತಾವು ದಿನದ 24 ಗಂಟೆ ಹಾಗೂ ವರ್ಷದ 365 ದಿನಗಳ ಕಾಲ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಅಪ್ಪಟ ರಾಜಕಾರಣಿ. ರಾಜಕೀಯದಿಂದ ನಿವೃತ್ತಿ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಈ ಇಳಿವಯಸ್ಸಿನಲ್ಲೂ ಇನ್ನು ಮುಂದೆ ಕಾಲಹರಣ ಮಾಡದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ತಮಗೆ ದೈವದಲ್ಲಿ ನಂಬಿಕೆ ಇದೆ. ಕಾರ್ಯಕರ್ತರ ಬೆಂಬಲ ಇದ್ದು, ಈ ಶಕ್ತಿಯಿಂದ ಹೋರಾಟ ಮುಂದುವರಿಸುತ್ತೇನೆ ಎಂದು ಘೋಷಿಸಿದರು.
ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ತಿರುಪತಿಗೆ ತೆರಳಿದ್ದ ದೇವೇಗೌಡರು ಅಲ್ಲಿ ಎರಡು ಬಾರಿ ತಿಮ್ಮಪ್ಪನ ದರ್ಶನ ಮಾಡಿ ಬಂದಿದ್ದಾರೆ. ತಿರುಪತಿಯಲ್ಲಿ ಭಾರೀ ಮಳೆಯಿದ್ದ ಕಾರಣದಿಂದ ಅವರು ದೇವಸ್ಥಾನದಲ್ಲೇ ಇರುವುದು ಅನಿವಾರ್ಯವಾಗಿತ್ತು.





