ಮೂಡುಬಿದಿರೆ: ಶಿರ್ತಾಡಿ ಫೋಟೋಗ್ರಾಫರ್‌ಗೆ ಹಲ್ಲೆ

ಮೂಡುಬಿದಿರೆ: ವಿವಾಹ ಕಾರ್ಯಕ್ರಮದಲ್ಲಿ ಫೋಟೋ ತೆಗೆಯುತ್ತಿದ್ದ ಫೋಟೋಗ್ರಾಫರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಶಿರ್ತಾಡಿಯಲ್ಲಿ ಬುಧವಾರ ಸಂಜೆ ನಡೆದಿದೆ. ಸಚ್ಚರಿಪೇಟೆಯ ವಧು ಹಾಗೂ ಮೂಡುಬಿದಿರೆ ಸಮೀಪದ ಮಾಂಟ್ರಾಡಿಯ ವರನ ವಿವಾಹವು ಶಿರ್ತಾಡಿ ಚರ್ಚ್ ಹಾಲ್‌ನಲ್ಲಿ ನಡೆದಿದ್ದು, ಬಳಿಕ ಔತಣಕೂಟವನ್ನು ಶಿರ್ತಾಡಿಯ ಬ್ರಹ್ಮ ರೆಸಿಡೆನ್ಸಿ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಶುಭಾಶಯ ಕೋರುವ ಸಂದರ್ಭದಲ್ಲಿ ವಧು-ವರರು ಡ್ಯಾನ್ಸ್ ಮಾಡಲು ತೆರಳಿದ್ದರು. ಈ ಸಮಯದಲ್ಲಿ ಶುಭಾಶಯ ಕೋರಲು ಸರತಿ ಸಾಲಿನಲ್ಲಿ ನಿಂತಿದ್ದ ಮುಂಡ್ಕೂರಿನ ವಿನ್ಸಿ ಎಂಬಾತ, ಫೋಟೋಗ್ರಾಫರ್ ವಧು-ವರರನ್ನು ಡಾನ್ಸ್‌ಗೆ ಕಳುಹಿಸಿದ್ದೆಂದು ಭಾವಿಸಿ, ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಶಿರ್ತಾಡಿಯ ಫೋಟೋಗ್ರಾಫರ್ ಹರೀಶ್ ಹಲ್ಲೆಗೊಳಗಾದ ಫೋಟೋಗ್ರಾಫರ್. ಗಾಯಗೊಂಡಿರುವ ಹರೀಶ್ ಅವರನ್ನು ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಮೂಡುಬಿದಿರೆ ವಲಯ ಸೌತ್ ಕೆನರಾ ಫೋಟೋಗ್ರಾಫರ್ ಅಸೋಶಿಯೇಷನ್ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.





