ಮಂಗಳೂರು: ಇಂದು ನೂತನ ಮೆಸ್ಕಾಂ ಭವನ ಉದ್ಘಾಟನೆ
ಮಂಗಳೂರು.ಮೆ.18: ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ)ನ ನೂತನ ಆಡಳಿತ ಕಚೇರಿ ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಳಿಯಲ್ಲಿ 25 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ್ಡಿದ್ದು 61ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.8 ಅಂತಸ್ತುಗಳನ್ನು ಹೊಂದಿರುವ ಸ್ವಂತ ಕಟ್ಟಡ ಮೇ19ರಂದು ಸಂಜೆ 4.30 ಗಂಟೆಗೆ ರಾಜ್ಯ ಇಂಧನ ಸಚಿವ ಡಿ.ಕೆ.ಶಿವ ಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕ ನಂಜಪ್ಪ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಅದೇ ದಿನ ಸಂಜೆ 5 ಗಂಟೆಗೆ ಮಂಗಳೂರು ಪುರಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ,ಯುವಜನ ಸೇವೆ ,ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಅಭಯ ಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ ಎಂದು ಚಿಕ್ಕ ನಂಜಪ್ಪ ತಿಳಿಸಿದ್ದಾರೆ.
ಮೆಸ್ಕಾಂ ಗ್ರಾಹಕರ ದೂರು ಸ್ವೀಕಾರಕ್ಕೆ ಜುಲೈ 1ರೊಳಗೆ ನೂತನ ಸರ್ವಿಸ್ ಸ್ಟೇಷನ್,ಸಹಾಯವಾಣಿ ಆರಂಭ :-ಮೆಸ್ಕಾಂಗ್ರಾಹಕರ ದೂರುಗಳನ್ನು ಒಂದು ಕಡೆ ಸ್ವೀಕರಿಸಿ ಕ್ಲಪ್ತ ಸಮಯದಲ್ಲಿ ಪರಿಹಾರ ನೀಡಲು ಜೂನ್ 15ರಿಂದ ಜುಲೈ 1ರೊಳಗೆ ಕದ್ರಿಯಲ್ಲಿ ಸೆಂಟ್ರಲ್ ಸರ್ವಿಸ್ ಸ್ಟೇಷನ್ ಹಾಗೂ 1912 ಸಹಾಯವಾಣಿಯನ್ನು ಆರಂಭಿಸಲಾಗುವುದು ಎಂದು ಮೆಸ್ಕಾಂ ಎಂ.ಡಿ ಚಿಕ್ಕ ನಂಜಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೆಸ್ಕಾಂ ವತಿಯಿಂದ 6 ಹೊಸ ಸಬ್ ಸ್ಟೇಶನ್‌ಗಳನ್ನು ಆರಂಭಿಸಲಾಗುವುದು.ಮೆಸ್ಕಾಂನ ವಿವಿಧ ವಿಭಾಗದಲ್ಲಿ ಕೊರತೆ ಇದ್ದ ಖಾಯಂ ನೌಕರರ ಸಂಖ್ಯೆಯನ್ನು ಹೆಚ್ಚಿಸಲಾಗುವುದು.ಈಗಾಗಲೆ 500 ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ ಶೀಘ್ರದಲ್ಲಿ ಈ ಹುದ್ದೆಗಳನ್ನು ತುಂಬಲಾಗುವುದು.ಲೈನ್ ಮೆನ್‌ಗಳ ಕೊರತೆಯನ್ನು ತುಂಬಲು ಹೊಸ ನೇಮಕಾತಿ ನಡೆದಿದೆ.ನೀರಾವರಿಗೆ 7000ಐಪಿ ಸೆಟ್‌ಗಳನ್ನು ಸಕ್ರಮಗೊಳಿಸಿ ನೀಡಲಾಗಿದೆ.ಶೀಘ್ರದಲ್ಲಿ 14,000 ಐಪಿ ಸೆಟ್‌ಗಳನ್ನು ಅಳವಡಿಸಲು ಕ್ರಮ ಕೈ ಗೊಳ್ಳಲಾಗುವುದು.ಸುಳ್ಯದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ 1.10 ಕೆ.ವಿ ಸೆಟ್ ಸಬ್ ಸ್ಟೇಷನ್ ಆಗಿ ಮಾರ್ಪಾಡು ಮಾಡಲು ಅರಣ್ಯ ಭೂಮಿ ಹಾಗೂ ಇತರ ಕಂದಾಯ ಭೂಮಿ ನೀಡುವ ಸಮಸ್ಯೆ ಪರಿಹಾರಗೊಂಡರೆ ಆ ಭಾಗದ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಚಕ್ಕ ನಂಜಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮೆಸ್ಕಾಂ ತಾಂತ್ರಿಕ ನಿರ್ದೇಶಕ ರಾಮಕೃಷ್ಣ ,ಮುಖ್ಯ ಆರ್ಥಿಕ ಅಧಿಕಾರಿ ಡಿ.ಆರ್.ಶ್ರೀನಿವಾಸ್ ,ಮೆಸ್ಕಾಂ ಸಾರ್ವಜನಿಕ ಸಂಪರ್ಕಅಧಿಕಾರಿ ಶ್ರೀನಿವಾಸ ಶೆಟ್ಟಿ ,ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಮೊದಲಾದವರು ಉಪಸ್ಥಿತರಿದ್ದರು.







