ಗ್ರಾಮ ದತ್ತು ಸ್ವೀಕಾರ ಎಂದರೆ ಮಗುವನ್ನು ದತ್ತು ತೆಗೆದುಕೊಂಡಂತೆ: ಕ ವಿ.ತಂಗರಾಜು
ಗ್ರಾಮ ದತ್ತು ಸ್ವೀಕಾರ ಉದ್ಘಾಟನಾ ಕಾರ್ಯಕ್ರಮ

ಕುಶಾಲನಗರ, ಮೇ 18: ಗ್ರಾಮ ದತ್ತು ಸ್ವೀಕಾರ ಯೋಜನೆ 1982ರಲ್ಲಿ ಪ್ರಥಮವಾಗಿ ತಮಿಳುನಾಡಿನ ಮೂರು ಹಳ್ಳಿಗಳನ್ನು ಸ್ವೀಕಾರ ಮಾಡಿಕೊಂಡಿದ್ದು, ಇಂದಿಗೂ ಆ ಗ್ರಾಮಗಳ ಆರ್ಥಿಕ ಅಭಿವೃದ್ಧಿ ಹೆಚ್ಚುತ್ತಲೆ ಇದೆ. ಗ್ರಾಮ ದತ್ತು ಸ್ವೀಕಾರ ಎಂದರೆ ಒಂದು ಸಣ್ಣ ಮಗುವನ್ನು ದತ್ತು ತೆಗೆದುಕೊಂಡು ಗ್ರಾಮವನ್ನು ಅಭಿವೃದ್ಧಿಯತ್ತ ಮುನ್ನಡೆಸುವುದು ಎಂದು ಮಂಗಳೂರು ಕಾರ್ಪೊರೇಶನ್ ಬ್ಯಾಂಕ್‌ನ ಪ್ರಧಾನ ಕಚೇರಿಯ ಮಹಾ ಪ್ರಬಂಧಕ ವಿ.ತಂಗರಾಜು ಅಭಿಪ್ರಾಯ ಪಟ್ಟರು.
ಅವರು ಕೂಡಿಗೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕೂಡಿಗೆಯ ಸದ್ಗುರು ಅಪ್ಪಯ್ಯ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ದತ್ತು ಸ್ವೀಕಾರ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಗಳ ಆರ್ಥಿಕ ಸ್ವಾವಲಂಬನೆ, ಬ್ಯಾಂಕ್‌ನ ಸೌಲಭ್ಯಗಳ ಸದ್ಬಳಕೆ, ಸರಕಾರದ ಸಬ್ಸಿಡಿ, ಅನುದಾನಗಳು ಇತ್ತೀಚಿನ ದಿನಗಳಲ್ಲಿ ಉದಾಹರಣೆಗೆ ಅಡುಗೆ ಅನಿಲ ಸಬ್ಸಿಡಿ ಮುಂತಾದವುಗಳು ನೇರವಾಗಿ ಜನರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಸರಕಾರದ ಎಲ್ಲ ಯೋಜನೆಗಳು ಸಬ್ಸಿಡಿಗಳು ಯಾವುದೇ ಅಡೆತಡೆಗಳಿಲ್ಲದೆ ಯೋಜನೆಯ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಆಗುತ್ತವೆ ಎಂದು ಅವರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಕಾರ್ಪೊರೇಷನ್ ಬ್ಯಾಂಕ್ ಮೈಸೂರು ವಲಯ ಮುಖ್ಯಸ್ಥ ಎಂ.ರಂಗಸ್ವಾಮಿ ಮಾತನಾಡಿ, ಭಾರತ ಸರಕಾರ ಮತ್ತು ಪ್ರಧಾನ ಮಂತ್ರಿ ನಿರ್ದೇಶನಾಲಯ ಇವರ ಆದೇಶದನ್ವಯ ಗ್ರಾಮೀಣ ಅಭಿವೃದ್ಧಿ ಇಲಾಖೆಯು ಕಾರ್ಪೊರೇಷನ್ ಬ್ಯಾಂಕ್‌ನ ನೇತೃತ್ವದಲ್ಲಿ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ, ರಿಯಾಯಿತಿ ಸೌಲಭ್ಯ, ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸಲು ಯುವಕ ಯುವತಿಯರಿಗೆ ಸ್ವ ಉದ್ಯೋಗ ತರಬೇತಿ ನೀಡುವುದು. ತರಬೇತಿಯ ನಂತರ ಸಾಲ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಮುಂದುವರಿಯಲು ಇಂತಹ ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮಗಳು ಅನುಕೂಲವಾಗುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಗ್ರಾಮ ದತ್ತು ಸ್ವೀಕಾರ ಯೋಜನೆಯು ಸಾಲ ಮರು ಪಾವತಿ ಮಾಡಲು ಪ್ರಮುಖವಾದ ಪಾತ್ರವು ಗ್ರಾಮೀಣ ಜನತೆಯದಾಗಿರುತ್ತದೆ. ಅಭಿರುಚಿಯ ಅನುಗುಣಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆದು ತನ್ನ ಬದುಕನ್ನು ರೂಢಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕೂಡಿಗೆ ಕಾಬ್‌ಸೆಟ್‌ನ ನಿರ್ದೇಶಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ನಬಾರ್ಡ್ ಮೇಲ್ವಿಚಾರಕ ಎಂ.ಸಿ.ನಾಣಯ್ಯ, ತಾಲೂಕು ತಹಶೀಲ್ದಾರ್ ಶಿವಪ್ಪ, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್, ಕೂಡಿಗೆ ಗ್ರಾಪಂ ಅಧ್ಯಕ್ಷೆ ಪ್ರೇಮಲೀಲಾ, ಜಿಪಂ ಸದಸ್ಯೆ ಮಂಜುಳಾ, ಕೂಡಿಗೆ ಸಹಕಾರಿ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್‌ಕುಮಾರ್, ಕಾರ್ಪೊರೇಷನ್ ಬ್ಯಾಂಕ್ ಸ್ವ-ಉದ್ಯೋಗ ಸಂಸ್ಥೆಯ ಮುಖ್ಯಸ್ಥ ಲಿಂಗಣ್ಣ, ಗ್ರಾಪಂ ಉಪಾಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು.







