ದೇವಟ್ ಪರಂಬು ಹೆಸರಿನಲ್ಲಿ ವಿನಾಕಾರಣ ವಿವಾದ: ಆರೋಪ
ಮಡಿಕೇರಿ ಮೇ 18: ಆಧಾರವಿಲ್ಲದ ಟಿಪ್ಪುವಿನ ಇತಿಹಾಸದ ಘಟನಾವಳಿಯನ್ನು ಮುಂದಿಟ್ಟುಕೊಂಡು ಹುತಾತ್ಮರ ಹೆಸರಿನಲ್ಲಿ ಕಂದಾಯ ದಾಖಲೆಗಳಲ್ಲಿ ಇಲ್ಲದ ದೇವಟ್ ಪರಂಬು ಹೆಸರಿನಲ್ಲಿ ವಿನಾಕಾರಣ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಅಯ್ಯಂಗೇರಿ ಮತ್ತು ಸಣ್ಣಪುಲಿಕೋಟು ಗ್ರಾಮಸ್ಥರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಯ್ಯಂಗೇರಿ ಗ್ರಾಪಂ ಸದಸ್ಯರಾದ ಮನೋಜ್ ಕೃಷ್ಣಪ್ಪ ಅಯ್ಯಂಗೇರಿ ವ್ಯಾಪ್ತಿಯಲ್ಲಿ ಗೌಡ, ಕೊಡವ, ಮುಸ್ಲಿಂ ಸೇರಿದಂತೆ ವಿವಿಧ ಜಾತಿ ಜನಾಂಗ ಬಾಂಧವರು ಸೌಹಾರ್ದಯುತವಾಗಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಸ್ಮಾರಕದ ಹೆಸರಿನಲ್ಲಿ ಗ್ರಾಮೀಣ ಪ್ರದೇಶವನ್ನು ಸಂಘರ್ಷದ ಸ್ಥಳವನ್ನಾಗಿ ಮಾಡುತ್ತಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣ ಮಾಡುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು.
ಸ್ಮಾರಕಕ್ಕೆಂದು ಕಲ್ಲಿನ ಕಂಬಗಳನ್ನು ಅಳವಡಿಸಲಾದ ಜಾಗ ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು, ಈ ಪ್ರದೇಶವನ್ನು 1952ರಲ್ಲಿ ಅಂದಿನ ಕೂರ್ಗ್ ಕಮೀಷನರ್ ಮೀಸಲು ಅರಣ್ಯವೆಂದು ನಿಗದಿಪಡಿಸಿದ್ದಾರೆ. ದೇವಟ್ ಪರಂಬು ಎನ್ನುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಈ ಪ್ರದೇಶವನ್ನು ಕಲ್ಲು ಕಟ್ಟಡದ ಪರಂಬು ಹಾಗೂ ಕಣಿಯಂಗೋಟು ಪರಂಬು ಎಂದು ಕರೆಯುತ್ತಾರೆ ಎಂದು ಮನೋಜ್ ಕೃಷ್ಣಪ್ಪ ತಿಳಿಸಿದರು.
ಸಿಎನ್‌ಸಿ ಸಂಘಟನೆ ಹುತಾತ್ಮರ ಸ್ಮರಣೆಗೆಂದು ಅಳವಡಿಸಿದ್ದ ಕಲ್ಲು ಕಂಬಗಳನ್ನು ಅರಣ್ಯ ಇಲಾಖೆಯೇ ಧ್ವಂಸ ಮಾಡಿರುವ ಸಾಧ್ಯತೆಗಳಿದೆ. ಅನಗತ್ಯವಾಗಿ ಗ್ರಾಮಸ್ಥರ ಮೇಲೆ ಆರೋಪ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಹಿಂದೆ ಸಿಎನ್‌ಸಿ ಸಂಘಟನೆ ಮೀಸಲು ಅರಣ್ಯದ ಬೇರೊಂದು ಸ್ಥಳದಲ್ಲಿ ದೇವಟ್ ಪರಂಬು ಎಂದು ಸ್ಮಾರಕ ನಿರ್ಮಿಸಲು ಮುಂದಾದಾಗ ಅರಣ್ಯ ಅಧಿಕಾರಿಗಳು ಕಾನೂನು ಬಾಹಿರ ಕೆಲಸಕ್ಕೆ ಸಹಕರಿಸಿದ್ದಾರೆ. ಆ ಸಂದರ್ಭ ಕೆಲವು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಈ ವರೆಗೆ ಯಾರನ್ನೂ ಬಂಧಿಸಿಲ್ಲ. ಬಳಸಲಾಗಿದ್ದ ವಾಹನ, ಜೆಸಿಬಿ, ಕ್ರೇನ್‌ಗಳನ್ನು ವಶಪಡಿಸಿಕೊಂಡಿಲ್ಲ.
ಇದೀಗ ಬೀಳಿಸಲ್ಪಟ್ಟಿರುವ ಕಲ್ಲು ಕಂಬಗಳಿಗೆ ಸಂಬಂಧಿಸಿದಂತೆ ಗ್ರಾಮದ ಕೆಲವರ ವಿರುದ್ಧ ದೂರು ದಾಖಲಾಗಿದೆ. ಅನಗತ್ಯವಾಗಿ ಪೊಲೀಸರು ಅಮಾಯಕ ಗ್ರಾಮಸ್ಥರನ್ನು ಬಂಧಿಸುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ವಿವಾದಿತ ಸ್ಥಳದ ಕಲ್ಲನ್ನು ಅರಣ್ಯ ಇಲಾಖೆ ತಕ್ಷಣ ತನ್ನ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ ಮನೋಜ್ ಕೃಷ್ಣಪ್ಪ ತಪ್ಪಿದ್ದಲ್ಲಿ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಗ್ರಾಮಸ್ಥರಾದ ಕೆ.ಕೆ.ಪೂರ್ಣಯ್ಯ ಮಾತನಾಡಿ, ಶತಮಾನಗಳ ಹಿಂದಿನ ಘಟನೆಯನ್ನು ಆಧರಿಸಿ ಇಂದು ಕಂದಾಯ ದಾಖಲೆಯಲ್ಲಿ ಇಲ್ಲದ ಅಯ್ಯಂಗೇರಿಯ ಅರಣ್ಯ ಪ್ರದೇಶದಲ್ಲಿ ಸ್ಮಾರಕ ರಚನೆ ಸರಿಯಾದ ಕ್ರಮವಲ್ಲವೆಂದರು. ಸ್ಮಾರಕಕ್ಕೆ ವರ್ಷಕ್ಕೆ ಒಂದು ಬಾರಿ ಪೂಜೆ ಸಲ್ಲಿಸುವುದು ವಾಡಿಕೆ, ಆದರೆ ಇಲ್ಲಿ ತಿಂಗಳಿಗೆ ನಾಲ್ಕು ಬಾರಿ ಪೂಜೆ ನಡೆಸಲಾಗುತ್ತಿದೆ. ಪೂಜೆ ಹೆಸರಿನಲ್ಲಿ ಮೋಜು ಮಸ್ತಿ ನಡೆಯುತ್ತಿರುವುದಾಗಿ ಆರೋಪಿಸಿದರು
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೆ.ವಸಂತ್, ಅನೂಪ್, ಪೊನ್ನಪ್ಪ, ಲವ ಹಾಗೂ ಇಸ್ಮಾಯೀಲ್ ಉಪಸ್ಥಿತರಿದ್ದರು.







