ವಾಯುಮಾಲಿನ್ಯ ಕುರಿತ ಡಬ್ಲೂಎಚ್‌ಒ ವರದಿ ದಾರಿ ತಪ್ಪಿಸುತ್ತಿದೆ: ಸರಕಾರ
ಹೊಸದಿಲ್ಲಿ, ಮೇ 18: ವಿಶ್ವದ ಅತ್ಯಂತ ಮಲಿನ ಕೊಳಕು ನಗರಗಳ ಪಟ್ಟಿಯಲ್ಲಿ 30ಕ್ಕೂ ಅಧಿಕ ಭಾರತೀಯ ನಗರಗಳನ್ನು ಹೆಸರಿಸಿರುವ ವಾಯುಮಾಲಿನ್ಯ ಕುರಿತ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ)ಯ ವರದಿಯು ದಾರಿ ತಪ್ಪಿಸುವಂಥದ್ದಾಗಿದೆ ಮತ್ತು ಅಮೆರಿಕ ಹಾಗೂ ಯುರೋಪ್‌ಗಳಲ್ಲಿಯ ಪ್ರಮುಖ ನಗರಗಳಲ್ಲಿನ ವಾಯುಮಾಲಿನ್ಯ ದತ್ತಾಂಶಗಳನ್ನು ಭಾರತವು ಶೀಘ್ರವೇ ಬಿಡುಗಡೆಗೊಳಿಸಲಿದೆ ಎಂದು ಪರಿಸರ ಸಚಿವ ಪ್ರಕಾಶ ಜಾವಡೇಕರ್ ಅವರು ಬುಧವಾರ ಇಲ್ಲಿ ಹೇಳಿದರು.
ವಾಯುವಿನ ಗುಣಮಟ್ಟ ವಿಶ್ಲೇಷಣೆ ವೇಳೆ ಸಲ್ಫರ್ ಡಯಾಕ್ಸೈಡ್, ನೈಟ್ರೋಜನ್ ಡಯಾಕ್ಸೈಡ್ ಮತ್ತು ಬೆಂಝೀನ್‌ನಂತಹ ವಿವಿಧ ಪ್ರಮುಖ ಮಾಲಿನ್ಯ ಕಾರಕಗಳನ್ನು ಡಬ್ಲೂಎಚ್‌ಒ ವರದಿಯು ಪರಿಗಣಿಸಿಲ್ಲ ಎಂದು ಹೇಳಿದ ಅವರು, ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಕೊಂಕುಗಳನ್ನು ನೋಡಿಕೊಳ್ಳುವುದನ್ನು ಬಿಟ್ಟು ಭಾರತ ಮತ್ತು ಇತರ ಕೆಲವು ರಾಷ್ಟ್ರಗಳ ಮೇಲೆಯೇ ಹೆಚ್ಚಿನ ಗಮನ ಹರಿಸುವುದು ಏಕೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
2012-13ರ ದತ್ತಾಂಶಗಳನ್ನು ಆಧರಿಸಿರುವ ಡಬ್ಲೂಎಚ್‌ಒ ವರದಿಯನ್ನು ಪಿಎಂ 10 ಮತ್ತು ಪಿಎಂ 2.5 ಕಣಪದಾರ್ಥಗಳನ್ನು ಪರಿಗಣನೆಗೆ ತೆಗೆದುಕೊಂಡು ಸಿದ್ಧಪಡಿಸಲಾಗಿದೆ ಮತ್ತು ದಿಲ್ಲಿಗೆ ವಿಶ್ವದ 11ನೇ ಅತ್ಯಂತ ಕೊಳಕು ನಗರವೆಂಬ ಪಟ್ಟ ಕಟ್ಟಲಾಗಿದೆ. ಈ ವರದಿಯ ಬಗ್ಗೆ ಎಚ್ಚರಿಸಿರುವ ಪರಿಸರವಾದಿಗಳು ಅದು ಸರಿಯಾದ ಚಿತ್ರಣವನ್ನು ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಓರೆನ್,ಬೆಂಝೀನ್,ಸಲ್ಫರ್ ಡಯಾಕ್ಸೈಡ್‌ಗಳಂತಹ ಇತರ ಎಂಟು ಪ್ರಮುಖ ಮಾಲಿನ್ಯಕಾರಕಗಳಿವೆ. ಆದ್ದರಿಂದ ಪಿಎಂ 2.5 ಒಂದನ್ನೇ ಆಧರಿಸಿ ನಗರಗಳನ್ನು ಮಾಲಿನ್ಯಪೂರಿತ ಎಂದು ವರ್ಗೀಕರಿಸುವುದು ದಾರಿ ತಪ್ಪಿಸುವಂಥದ್ದಾಗಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಜಾವಡೇಕರ್,ಅಮೆರಿಕ ಮತ್ತು ಯುರೋಪ್‌ಗಳಲ್ಲಿಯ ಪ್ರಮುಖ ನಗರಗಳ ವಾಯುಮಾಲಿನ್ಯ ದತ್ತಾಂಶಗಳನ್ನು ಸರಕಾರವು ಶೀಘ್ರವೇ ಬಿಡುಗಡೆಗೊಳಿಸಲಿದೆ. ಈ ದತ್ತಾಂಶಗಳನ್ನು ಪಡೆದುಕೊಳ್ಳುವುದು ಸಮಸ್ಯೆಯೇನಲ್ಲ. ಜನರಿಗೆ ಸಮಗ್ರ ಚಿತ್ರಣ ಗೊತ್ತಾಗಬೇಕು ಎಂದರು.







