ದಿಲ್ಲಿ, ಗುರ್ಗಾಂವ್, ನೊಯ್ಡಗಳಲ್ಲಿ ಮುಸ್ಲಿಮರಿಗೆ ಬಾಡಿಗೆ ಮನೆ ಇಲ್ಲ!
ವಿಶ್ವ ಸಂಸ್ಥೆ ವಿವಿ ಅಧ್ಯಯನದಿಂದ ಬಹಿರಂಗ
ಹೊಸದಿಲ್ಲಿ, ಮೇ 18 : ಮುಸ್ಲಿಮರಿಗೆ ಬಾಡಿಗೆ ಮನೆ ಕೊಡಲು ಹಲವರು ಹಿಂದೇಟು ಹಾಕುತ್ತಿರುವುದು ಇತ್ತೀಚೆಗಿನ ವರ್ಷಗಳಲ್ಲಿ ಹೊಸ ಸಂಗತಿಯೇನಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಮುಸ್ಲಿಮ್ ಯುವಕನೊಬ್ಬ ಕೂಡ ತಾನು ಪುಣೆಯಲ್ಲಿ ಮನೆ ಬಾಡಿಗೆಗೆ ಪಡೆಯಲು ಹಿಂದೂ ಹೆಸರನ್ನು ಬಳಸಬೇಕಾಯಿತೆಂದು ಬಹಿರಂಗ ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಕಳೆದ ವಾರ ಬಿಡುಗಡೆಯಾದ ಹೆಲ್ಸಿಂಕಿಯಲ್ಲಿರುವ ವಿಶ್ವ ಸಂಸ್ಥೆ ವಿಶ್ವವಿದ್ಯಾನಿಲಯವಾದ ವರ್ಲ್ಡ್ ಇನ್‌ಸ್ಟಿಟ್ಯೂಟ್ ಫಾರ್ ಡೆವಲಪ್‌ಮೆಂಟಲ್ ಇಕನಾಮಿಕ್ ರಿಸರ್ಚ್ ನಡೆಸಿದ ಅಧ್ಯಯನ ವರದಿಯೊಂದರ ಪ್ರಕಾರ ದಿಲ್ಲಿ, ಗುರ್ಗಾಂವ್ ಹಾಗೂ ನೊಯ್ಡಿದಲ್ಲಿ ಮುಸ್ಲಿಮರಿಗೆ ಬಾಡಿಗೆ ಮನೆ ಪಡೆಯುವುದು ತೀರಾ ತ್ರಾಸದಾಯಕ ವಿಷಯವಾಗಿದೆ.
‘‘ಒಬ್ಬ ಮುಸ್ಲಿಮ್ ಅರ್ಜಿದಾರ ಕನಿಷ್ಠ 45 ಕಡೆಗಳಲ್ಲಿ ಬಾಡಿಗೆ ಮನೆಗಾಗಿ ವಿಚಾರಿಸಿದಲ್ಲಿ 10 ಮನೆ ಮಾಲಕರು ಸಂಪರ್ಕಿಸಿದರೆ, ಮೇಲ್ವರ್ಗದ ಹಿಂದೂ ಅರ್ಜಿದಾರನೊಬ್ಬ 28 ಕಡೆಗಳಲ್ಲಿ ಬಾಡಿಗೆ ಮನೆಗೆ ವಿಚಾರಿಸಿದಲ್ಲಿ ಅಷ್ಟೇ ಸಂಖ್ಯೆಯ ಮನೆ ಮಾಲಕರು ಸಕಾರಾತ್ಮಕ ಪ್ರತಿಕ್ರಿಯೆ ತೋರಬಹುದು,’’ಎಂದು ಅಧ್ಯಯನ ತಿಳಿಸಿದೆ. ಇದರರ್ಥ ಹಿಂದೂಗಳಿಗೆ ಹೋಲಿಸಿದಾಗ ಮುಸ್ಲಿಮರು ಬಾಡಿಗೆ ಮನೆಗಾಗಿ ಶೇ.60ರಷ್ಟು ಹೆಚ್ಚು ಪ್ರಯತ್ನ ಮಾಡಬೇಕಾಗುತ್ತದೆ.
ಅದೇ ಸಮಯ ಪರಿಶಿಷ್ಟ ಜಾತಿ ಅಥವಾ ಹಿಂದುಳಿದ ವರ್ಗಗಳ ಅರ್ಜಿದಾರರಿಗೆ ಬಾಡಿಗೆ ಮನೆ ಹುಡುಕುವ ಸಂದರ್ಭ ಇಂತಹ ಸಮಸ್ಯೆ ಎದುರಾಗುವುದಿಲ್ಲ, ಎಂದು ಅಧ್ಯಯನ ತಿಳಿಸಿದೆ. ಒಂದು ಬೆಡ್‌ರೂಮ್ ಮನೆಯನ್ನು ಮುಸ್ಲಿಮರಿಗೆ ಬಾಡಿಗೆಗೆ ನೀಡಲು ಹೆಚ್ಚಿನ ಮನೆ ಮಾಲಕರು ಹಿಂಜರಿಯುತ್ತಿದ್ದಾರೆಂದೂ ಈ ಅಧ್ಯಯನ ವರದಿ ಹೇಳಿದೆ.
ಈ ಅಧ್ಯಯನಕ್ಕಾಗಿ ಸಮೀಕ್ಷೆಯನ್ನು 2015ರ ಬೇಸಿಗೆಯಲ್ಲಿ ಕೈಗೊಳ್ಳಲಾಗಿತ್ತು. ಸೌಗತೊ ದತ್ತ ಹಾಗೂ ವಿಕ್ರಮ್ ಪಥಾನಿಯಾ ಅವರಿಂದ ಜಂಟಿಯಾಗಿ ನಡೆಸಲಾದ ಈ ಅಧ್ಯಯನದ ಹೆಸರು ‘ಫಾರ್ ಹೂ ಡಸ್ ದಿ ಫೋನ್ ರಿಂಗ್? ಡಿಸ್ಕ್ರಿಮಿನೇಶನ್ ಇನ್ ದಿ ರೆಂಟಲ್ ಹೌಸಿಂಗ್ ಮಾರ್ಕೆಟ್ ಇನ್ ಡೆಲ್ಲಿ,ಇಂಡಿಯಾ.’’





