ಸೌದಿ ವಿರುದ್ಧ ಮೊಕದ್ದಮೆಗೆ ಅವಕಾಶ ನೀಡುವ ಮಸೂದೆ ಅಂಗೀಕಾರ 9/11 ದಾಳಿ

ವಾಶಿಂಗ್ಟನ್, ಮೇ 18: 9/11 ಭಯೋತ್ಪಾದಕ ದಾಳಿಯ ಸಂತ್ರಸ್ತರು ಸೌದಿ ಅರೇಬಿಯದಿಂದ ಪರಿಹಾರ ಕೋರಿ ಮೊಕದ್ದಮೆಗಳನ್ನು ದಾಖಲಿಸಲು ಅವಕಾಶ ಕಲ್ಪಿಸುವ ಮಸೂದೆಯೊಂದನ್ನು ಅಮೆರಿಕದ ಸೆನೆಟ್ ಮಂಗಳವಾರ ಅಂಗೀಕರಿಸಿದೆ.
ಇದು ಅಮೆರಿಕ ಮತ್ತು ಸೌದಿ ಅರೇಬಿಯಗಳ ನಡುವೆ ಹೊಸ ಸಂಘರ್ಷವೊಂದಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.
2001ರ ದಾಳಿಗೆ ತಾನು ಜವಾಬ್ದಾರನಲ್ಲ ಎಂದು ಸೌದಿ ಅರೇಬಿಯ ಹೇಳುತ್ತಾ ಬಂದಿದ್ದು, ಅಮೆರಿಕದ ಸೆನೆಟ್ ಅಂಗೀಕರಿಸಿರುವ ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಸೂದೆ ಕಾನೂನಾಗಿ ಮಾರ್ಪಾಡಾದರೆ, ತನ್ನಲ್ಲಿರುವ 75,000 ಕೋಟಿ ಡಾಲರ್ ಅಮೆರಿಕನ್ ಶೇರುಗಳು ಮತ್ತು ಇತರ ಅಮೆರಿಕನ್ ಸೊತ್ತುಗಳನ್ನು ಮಾರಾಟ ಮಾಡುವ ಬೆದರಿಕೆಯನ್ನು ಸೌದಿ ಅರೇಬಿಯ ಒಡ್ಡಿದೆ.
‘ಭಯೋತ್ಪಾದನೆ ಪ್ರಾಯೋಜಕರ ವಿರುದ್ಧದ ನ್ಯಾಯ ಕಾಯ್ದೆ’ (ಜೆಎಎಸ್‌ಟಿಎ)ಯನ್ನು ಸೆನೆಟ್ ಅವಿರೋಧವಾಗಿ ಧ್ವನಿಮತದಿಂದ ಅಂಗೀಕರಿಸಿದೆ. ಇನ್ನು ಮುಂದೆ ಅದು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅಂಗೀಕಾರಗೊಳ್ಳಬೇಕಾಗಿದೆ. ಇದಕ್ಕಾಗಿ ಈವರೆಗೆ ದಿನ ನಿಗದಿಯಾಗಿಲ್ಲ.
ಮಸೂದೆಯು ಕಾನೂನಾದರೆ, ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯದಲ್ಲಿ ಸೌದಿ ಅರೇಬಿಯ ಹಾಗೂ 9/11ರ ದಾಳಿಯಲ್ಲಿ ಶಾಮೀಲಾಗಿದೆಯೆಂದು ಹೇಳಲಾದ ದೇಶಗಳ ವಿರುದ್ಧ ಮೊಕದ್ದಮೆ ಹೂಡಲು ದಾಳಿಯ ಸಂತ್ರಸ್ತರಿಗೆ ಅವಕಾಶ ನೀಡುತ್ತದೆ. ವಿಶ್ವ ವ್ಯಾಪಾರ ಕೇಂದ್ರ ಮತ್ತು ಪೆಂಟಗನ್ ಮೇಲೆ ನಡೆದ ದಾಳಿಗಳಲ್ಲಿ ಸೌದಿಗಳು ಶಾಮೀಲಾಗಿದ್ದಾರೆ ಎನ್ನುವುದನ್ನು ಸಾಬೀತುಪಡಿಸಲು ವಕೀಲರು ಪ್ರಯತ್ನಿಸುತ್ತಾರೆ.





