ರೈತರಿಗೆ 11 ಸಾವಿರ ಕೋಟಿ ರೂ. ಕೃಷಿ ಸಾಲ; ಚಿಂತನೆ

ಬೆಂಗಳೂರು, ಮೇ 18: ರಾಜ್ಯದ ರೈತರಿಗೆ ಪ್ರಸಕ್ತ ಸಾಲಿನಲ್ಲಿ 11 ಸಾವಿರ ಕೋಟಿ ರೂ. ಕೃಷಿ ಸಾಲ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದು ಸಹಕಾರ ಹಾಗೂ ಸಕ್ಕರೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2015-16ನೆ ಸಾಲಿನಲ್ಲಿ ರೈತರಿಗೆ 10,400 ಕೋಟಿ ರೂ.ಕೃಷಿ ಸಾಲ ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈ ಪ್ರಮಾಣವನ್ನು 11 ಸಾವಿರ ಕೋಟಿ ರೂ.ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದರು.
ಈ ಹಿಂದಿನ ಸರಕಾರದ ಅವಧಿಯಲ್ಲಿ 14 ಲಕ್ಷ ರೈತರಿಗೆ ಆರು ಸಾವಿರ ಕೋಟಿ ರೂ.ಕೃಷಿ ಸಾಲ ನೀಡಲಾಗುತ್ತಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ 21 ಲಕ್ಷ ರೈತರಿಗೆ 10,400 ಕೋಟಿ ರೂ.ಸಾಲ ಸೌಲಭ್ಯವನ್ನು ಕಲ್ಪಿಸಿದ್ದೇವೆ ಎಂದು ಮಹದೇವಪ್ರಸಾದ್ ಹೇಳಿದರು. ರೈತರಿಗೆ ನೀಡುವ ಕೃಷಿ ಸಾಲದಲ್ಲಿ ಶೇ.50ರಷ್ಟು ಪಾಲನ್ನು ನಬಾರ್ಡ್ ನೀಡುತ್ತಿತ್ತು. ಇದೀಗ, ನಬಾರ್ಡ್ ತನ್ನ ಪಾಲನ್ನು ಶೇ.40ಕ್ಕೆ ಇಳಿಕೆ ಮಾಡಿದೆ. ನಬಾರ್ಡ್ ಪಾಲನ್ನು ಶೇ.70ಕ್ಕೆ ಹೆಚ್ಚಳ ಮಾಡುವಂತೆ ಕೇಂದ್ರ ಕೃಷಿ ಸಚಿವ ರಾಧಮೋಹನ್ ಸಿಂಗ್‌ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ನಬಾರ್ಡ್‌ನಿಂದ ಹೆಚ್ಚಿನ ಆರ್ಥಿಕ ನೆರವು ಸಿಕ್ಕಿದರೆ ಮತ್ತಷ್ಟು ರೈತರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. 20 ಸಾವಿರ ರೂ.ದಿಂದ 3 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡಲಾಗುವುದು. ವಾರ್ಷಿಕ ಶೇ.10ರಷ್ಟು ಸಾಲದ ಪ್ರಮಾಣ ಹೆಚ್ಚಳ ಹಾಗೂ ಶೇ.25ರಷ್ಟು ಹೊಸ ರೈತರಿಗೆ ಸಾಲ ನೀಡುವಂತೆ ಜಿಲ್ಲಾ ಸಹಕಾರಿ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಸಾಲ ನೀಡುವಾಗ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಲಾಗಿದೆ. ರೈತರು ಯಾವ ಬೆಳೆಯನ್ನು ಎಷ್ಟು ಪ್ರದೇಶದಲ್ಲಿ ಬೆಳೆಯುತ್ತಾರೆ ಎಂಬ ಆಧಾರವನ್ನಿಟ್ಟುಕೊಂಡು ಶೂನ್ಯಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತಿದೆ ಎಂದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದ್ದ ಹಗರಣದ ಹಿನ್ನೆಲೆಯಲ್ಲಿ ಹಿಂದಿನ ಆಡಳಿತ ಮಂಡಳಿಯನ್ನು ವಜಾ ಮಾಡಲು ನೀಡಿದ್ದ ಸೂಚನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ರಾಜ್ಯ ಸರಕಾರವು ಈ ತಡೆಯಾಜ್ಞೆ ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ಹಗರಣ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಬ್ಯಾಂಕ್‌ಗೆ ಆಗಿರುವ ನಷ್ಟವನ್ನು ಭರಿಸಲು ಆರೋಪಿಗಳಿಗೆ ಸೇರಿದ ಸುಮಾರು ನೂರು ಕೋಟಿ ರೂ.ವೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವುಗಳನ್ನು ಹರಾಜು ಹಾಕಿ ನಷ್ಟವನ್ನು ಭರಿಸಿಕೊಳ್ಳಲಾಗುವುದು.
- ಮಹದೇವಪ್ರಸಾದ್, ಸಹಕಾರ ಸಚಿವರು







