ಸಕ್ಕರೆ ಕಾರ್ಖಾನೆಗಳಿಗೆ ಸಚಿವ ಮಹದೇವಪ್ರಸಾದ್ ಕರೆ
ರೈತರಿಗೆ ಬಾಕಿ ಪಾವತಿಸಿ ತೆರಿಗೆ ವಿನಾಯಿತಿ ಪಡೆಯಿರಿ

ಬೆಂಗಳೂರು, ಮೇ 18: ರಾಜ್ಯದ 38 ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಬಾಕಿಯನ್ನು ಮೂರು ತಿಂಗಳಲ್ಲಿ ಪಾವತಿ ಮಾಡಿದರೆ, ಮುಂದಿನ ಎರಡು ವರ್ಷಗಳ ಕಾಲ ಆ ಕಾರ್ಖಾನೆಗಳಿಗೆ ಖರೀದಿ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಟನ್ ಕಬ್ಬಿನ ಮೇಲೆ 60-70 ರೂ.ಖರೀದಿ ತೆರಿಗೆ ವಿಧಿಸಲಾಗುತ್ತಿದೆ. ರೈತರಿಗೆ ಮೂರು ವರ್ಷಗಳ ಬಾಕಿಯನ್ನು ಮೂರು ತಿಂಗಳಲ್ಲಿ ಪಾವತಿ ಮಾಡಿದರೆ ಅಂತಹ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬಿನ ಖರೀದಿ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು ಎಂದರು.
ತೆರಿಗೆ ವಿನಾಯಿತಿ ನೀಡುವುದರಿಂದ ರಾಜ್ಯ ಸರಕಾರದ ಬೊಕ್ಕಸದ ಮೇಲೆ 400 ಕೋಟಿ ರೂ.ಗಳಷ್ಟು ಹೊರೆ ಬೀಳುತ್ತದೆ. ಆದರೂ, ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು ಸರಕಾರ ಈ ತೀರ್ಮಾನವನ್ನು ಕೈಗೊಂಡಿದೆ. 2013-14ನೆ ಸಾಲಿಗೆ ಸಂಬಂಧಿಸಿದಂತೆ ಕಾರ್ಖಾನೆಗಳು 278 ಕೋಟಿ ರೂ.ಗಳನ್ನು ರೈತರಿಗೆ ಪಾವತಿಸ ಬೇಕಿದೆ ಎಂದು ಅವರು ಹೇಳಿದರು.
ಕಾರ್ಖಾನೆಗಳಿಂದ ಅಷ್ಟೆ ಮೊತ್ತದ ಸಕ್ಕರೆಯನ್ನು ವಶಪಡಿಸಿಕೊಂಡು ಹರಾಜು ಹಾಕಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಸಕ್ಕರೆ ಕಾರ್ಖಾನೆಗಳು ನ್ಯಾಯಾಲಯದಿಂದ ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ತಂದಿವೆ. ಅದನ್ನು ತೆರವು ಮಾಡಲು ಯತ್ನಿಸಲಾಗುತ್ತಿದೆ ಎಂದರು.
ಸಕ್ಕರೆ ಉತ್ಪಾದನೆ ಕುಸಿತ: ರಾಜ್ಯದಲ್ಲಿ ಆವರಿಸಿರುವ ತೀವ್ರ ಬರಗಾಲದಿಂದಾಗಿ 2015-16ನೆ ಸಾಲಿನಲ್ಲಿ ಹತ್ತು ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಸಕ್ಕರೆ ಉತ್ಪಾದನೆ ಕಡಿಮೆ ಕುಸಿತವಾಗಲಿದ್ದು, ಸಕ್ಕರೆ ಬೆಲೆಯು ಹೆಚ್ಚಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.





