ಭಾರತ, ಚೀನಾಗಳಲ್ಲಿ ಹೆಚ್ಚಿನ ಮಾನಸಿಕ ರೋಗಿಗಳು: ಅಧ್ಯಯನ
ಚಿಕಿತ್ಸೆ ಪಡೆಯುತ್ತಿರುವವರು ತೀರಾ ಅಲ್ಪ
ಪ್ಯಾರಿಸ್, ಮೇ 18: ಜಗತ್ತಿನ ಒಟ್ಟು ಮಾನಸಿಕ ರೋಗಿಗಳ ಮೂರನೆ ಒಂದು ಭಾಗಕ್ಕಿಂತಲೂ ಹೆಚ್ಚು ಭಾಗ ಭಾರತ ಮತ್ತು ಚೀನಾಗಳಲ್ಲಿದ್ದಾರೆ, ಆದರೆ ಅವರ ಪೈಕಿ ಒಂದು ತೀರಾ ಸಣ್ಣ ಪ್ರಮಾಣದ ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.
ಎಲ್ಲಾ ಶ್ರೀಮಂತ ರಾಷ್ಟ್ರಗಳಲ್ಲಿರುವ ಒಟ್ಟು ಮಾನಸಿಕ ಹಾಗೂ ನರ ರೋಗಿಗಳಿಗಿಂತ ಹೆಚ್ಚಿನ ರೋಗಿಗಳು ಜಗತ್ತಿನ ಈ ಎರಡು ಜನಭರಿತ ದೇಶಗಳಲ್ಲಿದ್ದಾರೆ ಎಂದು ಅದು ಅಭಿಪ್ರಾಯಪಟ್ಟಿದೆ.
ಇಂಥ ಮಾನಸಿಕ ರೋಗಿಗಳ ಸಂಖ್ಯೆ ಮುಂದಿನ ದಶಕಗಳಲ್ಲಿ ಈ ದೇಶಗಳಲ್ಲಿ, ಅದರಲ್ಲೂ ಹೆಚ್ಚಾಗಿ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಭಾರತದಲ್ಲಿ ಮಾನಸಿಕ ರೋಗಿಗಳ ಸಂಖ್ಯೆ 2025ರ ವೇಳೆಗೆ ಈಗಿನ ಪ್ರಮಾಣದ ಕಾಲು ಭಾಗದಷ್ಟು ಹೆಚ್ಚಾಗಲಿದೆ.
ಚೀನಾವು ತನ್ನ ವೃದ್ಧ ಜನ ಸಮುದಾಯದ ಮಾನಸಿಕ ಕುಸಿತ ಸಮಸ್ಯೆಯನ್ನು ಹೇಗೆ ನಿಭಾಯಿಸವುದೆಂಬ ಚಿಂತೆಯಲ್ಲಿದೆ.
ತನ್ನ ಜನಸಂಖ್ಯೆಯ ಮಾನಸಿಕ ಆರೋಗ್ಯ ಆವಶ್ಯಕತೆಗಳನ್ನು ಈಡೇರಿಸಲು ಈ ಎರಡೂ ದೇಶಗಳು ಸನ್ನದ್ಧವಾಗಿಲ್ಲ ಎಂದು ವೈದ್ಯಕೀಯ ಪತ್ರಿಕೆ ‘ದ ಲ್ಯಾನ್ಸೆಟ್’ ಮತ್ತು ‘ದ ಲ್ಯಾನ್ಸೆಟ್ ಸೈಕಿಯಾಟ್ರಿ’ಗಳಲ್ಲಿ ಪ್ರಕಟಗೊಂಡ ಅಧ್ಯಯನ ವರದಿಗಳು ಹೇಳಿವೆ.





