ಸಂಕೀರ್ಣ ಜೀವದ ಉಗಮ 150 ಕೋಟಿ ವರ್ಷಗಳ ಹಿಂದೆಯೇ ಆಗಿತ್ತು: ನೂತನ ಸಂಶೋಧನೆ
ಪ್ಯಾರಿಸ್, ಮೇ 18: ಭೂಮಿಯಲ್ಲಿ ಸಂಕೀರ್ಣ ಜೀವ 150 ಕೋಟಿ ವರ್ಷಗಳಿಗೂ ಹಿಂದೆ ಆರಂಭವಾಯಿತು ಎನ್ನುವುದನ್ನು ತೋರಿಸುವ ಪಳೆಯುಳಿಕೆಗಳನ್ನು ತಾವು ಪತ್ತೆಹಚ್ಚಿರುವುದಾಗಿ ಸಂಶೋಧಕರು ಹೇಳಿದ್ದಾರೆ. ಅವರ ಲೆಕ್ಕಾಚಾರ ಸರಿಯಾದರೆ, ಈಗ ಭಾವಿಸಿರುವುದಕ್ಕಿಂತಲೂ ಸುಮಾರು 100 ಕೋಟಿ ವರ್ಷಗಳ ಹಿಂದೆಯೇ ಭೂಮಿಯಲ್ಲಿ ಜೀವದ ಉಗಮವಾಗಿದೆ.
ಈ ಕುರಿತ ಪ್ರಬಂಧವೊಂದು ‘ನೇಚರ್ ಕಮ್ಯುನಿಕೇಶನ್ಸ್’ನಲ್ಲಿ ಪ್ರಕಟಗೊಂಡಿದೆ.
ಆದರೆ, ಇದು ಪ್ರಕಟಗೊಂಡ ಕೂಡಲೇ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಪಳೆಯುಳಿಕೆ ಬಂಡೆಗಲ್ಲಿನ ಒಂದು ತುಂಡು ಎಂಬುದಾಗಿ ಕೆಲವು ವಿಜ್ಞಾನಿಗಳು ಹೇಳಿದರೆ, ಈ ವಿವರಣೆಯಿಂದ ತಮಗೆ ಒಂದಿನಿತೂ ತೃಪ್ತಿಯಾಗಿಲ್ಲ ಎಂದು ಇತರರು ಹೇಳಿದ್ದಾರೆ.
ಆರಂಭದಲ್ಲಿ ‘ಪ್ರೈಮೋರ್ಡಿಯಲ್ ಸೂಪ್’ (ಸಾವಯವ ಸಂಯುಕ್ತಗಳನ್ನು ಒಳಗೊಂಡ ಹಾಗೂ ಜೀವದ ಉಗಮ ಹಾಗೂ ಬೆಳವಣಿಗೆಗೆ ಪೂರಕ ಪರಿಸ್ಥಿತಿಗಳನ್ನು ಒಳಗೊಂಡ ದ್ರವ. ಭೂಮಿಯಲ್ಲಿ ಜೀವ ಇದರಿಂದಲೇ ಉಗಮಗೊಂಡಿದೆ ಎಂದು ಭಾವಿಸಲಾಗಿದೆ)ನಿಂದ ಉಗಮಗೊಂಡ ಬಳಿಕ ಜೀವ ನೂರಾರು ಕೋಟಿ ವರ್ಷಗಳವರೆಗೆ ಏಕಕೋಶವಾಗಿಯೇ ಉಳಿಯಿತು. ಆದರೆ, ಕೆಲವು ಕೋಶಗಳು ಬಳಿಕ ಸಂಗಮಗೊಂಡಿತು. ಈ ಅವಧಿಯನ್ನು ವಿಜ್ಞಾನಿಗಳು ‘ಜಡ ಬಿಲಿಯನ್’ ಎಂಬುದಾಗಿಯೂ ಕರೆದಿದ್ದಾರೆ. ಯಾಕೆಂದರೆ ಈ ಅವಧಿಯಲ್ಲಿ ವಿಕಾಸ ಸ್ಥಗಿತಗೊಂಡಂತೆ ಕಂಡುಬಂದಿತ್ತು. ಆದರೆ, ಒಂದು ಹಂತದಲ್ಲಿ ಒಂದು ಬೃಹತ್ ಬೆಳವಣಿಗೆಯೊಂದು ಕಂಡುಬಂತು. ಈ ಅವಧಿಯಲ್ಲಿ ಸಂಕೀರ್ಣ ಜೀವಕೋಶಗಳು ರೂಪುಗೊಂಡವು.
ಈ ಬೆಳವಣಿಗೆಯ ಕಾರಣದಿಂದಾಗಿಯೇ ಬಳಿಕ ಸಸ್ಯಗಳು ಹಾಗೂ ಪ್ರಾಣಿಗಳು ರೂಪುಗೊಂಡವು. ನ್ಯೂಕ್ಲಿಯಸ್ ಹೊಂದಿದ ಬಹು ಕೋಶಗಳ ಯೂಕರಯೋಟ್‌ಗಳು ಯಾವಾಗ ರೂಪುಗೊಂಡವು ಎಂಬ ಬಗ್ಗೆ ವಿಜ್ಞಾನಿಗಳ ನಡುವೆ ದಶಕಗಳಿಂದ ಬಿಸಿ ಬಿಸಿ ಚರ್ಚೆ ನಡೆಯುತ್ತಾ ಬಂದಿದೆ. ‘‘ಬಹುಕೋಶಗಳ ಯೂಕರಯೋಟ್‌ಗಳ ಉಗಮವನ್ನು ನಮ್ಮ ಸಂಶೋಧನೆ ಸುಮಾರು 100 ಕೋಟಿ ವರ್ಷಗಳಷ್ಟು ಹಿಂದಕ್ಕೆ ತಳ್ಳುತ್ತದೆ’’ ಎಂದು ನನ್‌ಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಜಿಯಾಲಜಿ ಆ್ಯಂಡ್ ಪ್ಯಾಲಿಓಂಟೋಲಜಿಯಲ್ಲಿ ಪ್ರೊಫೆಸರ್ ಆಗಿರುವ ಮವೊಯನ್ ಝೂ ಹೇಳುತ್ತಾರೆ. ಪಳೆಯುಳಿಕೆಗಳನ್ನು ಚೀನಾದ ಹಬೇಯ್ ಪ್ರಾಂತದ ಯನ್ಶನ್‌ನಲ್ಲಿ ಪತ್ತೆ ಹಚ್ಚಲಾಗಿದೆ.





