ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ: ಶರಪೋವಾಗೆ ನಿಷೇಧದ ಭೀತಿ
.jpg)
ಲಂಡನ್, ಮೇ 18: ರಶ್ಯದ ಟೆನಿಸ್ ತಾರೆ ಮರಿಯಾ ಶರಪೋವಾ ಬುಧವಾರ ಲಂಡನ್‌ನಲ್ಲಿ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್‌ನ ವಿಚಾರಣೆಗೆ ಹಾಜರಾಗಲಿದ್ದು, ಆಸ್ಟ್ರೇಲಿಯನ್ ಓಪನ್‌ನಲ್ಲಿ ಡ್ರಗ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿರುವುದಕ್ಕೆ ನಾಲ್ಕು ವರ್ಷಗಳ ಕಾಲ ನಿಷೇಧ ಎದುರಿಸುವ ಸಾಧ್ಯತೆಯಿದೆ ಎಂದು ಬ್ರಿಟನ್ ಮಾಧ್ಯಮ ವರದಿ ಮಾಡಿದೆ.
ಜನವರಿ 1 ರಂದು ವಿಶ್ವ ಉದ್ದೀಪನಾ ಮದ್ದು ತಡೆ ಘಟಕ(ವಾಡಾ) ನಿಷೇಧಿತ ಪಟ್ಟಿಗೆ ಸೇರಿಸಿರುವ ಮೆಲ್ಡೊನಿಯಮ್‌ನ್ನು ತಾನು ಸೇವಿಸಿದ್ದಾಗಿ ಮಾರ್ಚ್‌ನಲ್ಲಿ ಬಹಿರಂಗಪಡಿಸಿದ್ದ ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಶರಪೋವಾ ವಿಶ್ವವನ್ನು ಚಕಿತಗೊಳಿಸಿದ್ದರು.
ಕಳೆದ 10 ವರ್ಷಗಳಿಂದ ಡಾಕ್ಟರ್ ಸಲಹೆಯ ಮೇರೆಗೆ ಮೆಲ್ಡೋನಿಯಂ ಸೇವಿಸುತ್ತಿರುವೆ. ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೆಲಿಯನ್ ಓಪನ್‌ನ ವೇಳೆ ನಡೆಸಲಾಗಿದ್ದ ಡೋಪಿಂಗ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗುವ ತನಕ ಮೆಲ್ಡೋನಿಯಂ ನಿಷೇಧಿತ ದ್ರವ್ಯವೆಂದು ನನಗೆ ಗೊತ್ತಿರಲಿಲ್ಲ ಎಂದು ವಿಶ್ವದ ಶ್ರೀಮಂತ ಕ್ರೀಡಾಪಟು ಶರಪೋವಾ ಹೇಳಿದ್ದರು.
ಐಟಿಎಫ್‌ನ ಡೋಪಿಂಗ್ ವಿರೋಧಿ ಕಾರ್ಯಕ್ರಮದ ಪ್ರಕಾರ ಡೋಪಿಂಗ್ ಟೆಸ್ಟ್‌ನಲ್ಲಿ ವಿಫಲವಾಗುವ ಅಥ್ಲೀಟ್ 4 ವರ್ಷ ನಿಷೇಧ ಎದುರಿಸಲಿದ್ದಾರೆ. ವಿವಿಧ ಸಂದರ್ಭದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗಲಿದೆ.







