ವೇಶ್ಯಾವಾಟಿಕೆಯಂತಾಗಿರುವ ಖಾಸಗಿ ಶಾಲೆಗಳು: ಆಂಜನೇಯ

ಬೆಂಗಳೂರು, ಮೇ 18: ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪೋಷಕರಿಂದ ಹಣ ವಸೂಲು ಮಾಡುವ ಮೂಲಕ ಕೆಲವು ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡೆಯಂತೆ ವರ್ತಿಸುತ್ತಿವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ನೀಡಿರುವ ಹೇಳಿಕೆಯು ವಿವಾದದ ಸ್ವರೂಪ ಪಡೆದು ಕೊಂಡಿದೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಆಂಜನೇಯ, ಯುಪಿಎ ಸರಕಾರದ ಅವಧಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅನು ಕೂಲವಾಗುವಂತೆ ಕಡ್ಡಾಯ ಶಿಕ್ಷಣ ಕಾಯ್ದೆ(ಆರ್‌ಟಿಇ)ಯನ್ನು ಜಾರಿಗೆ ತರ ಲಾಯಿತು.
ಆದರೆ, ಕೆಲವು ಖಾಸಗಿ ಶಾಲೆಗಳು ಅಂತಹ ಮಕ್ಕಳ ಪೋಷಕರಿಂದಲೂ ಹಣ ವಸೂಲು ಮಾಡುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ ಎಂದರು.
ಎಲ್ಲ ಖಾಸಗಿ ಸಂಸ್ಥೆಗಳು ಆ ರೀತಿ ಮಾಡುತ್ತಿಲ್ಲ. ಅನೇಕ ಖಾಸಗಿ ಸಂಸ್ಥೆಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಅನೇಕ ಮಠ ಮಾನ್ಯಗಳು ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ ಎಂದು ಅವರು ಹೇಳಿದರು. ಮಾನವೀಯತೆಯನ್ನು ಮರೆತು ವರ್ತಿಸುತ್ತಿರುವ ಕೆಲವು ಖಾಸಗಿ ಶಾಲೆಗಳನ್ನು ಗಮನದಲ್ಲಿಟ್ಟುಕೊಂಡು ತಾನು ಆ ಹೇಳಿಕೆ ನೀಡಿದ್ದೆ ಎಂದು ಆಂಜನೇಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.







