ಬಿಸಿಸಿಐ ಚುನಾವಣೆಗೆೆ ತಡೆ ಹೇರಲು ಸುಪ್ರೀಂಗೆ ಸಿಎಬಿ ಮೊರೆ
ಹೊಸದಿಲ್ಲಿ, ಮೇ 18: ಬಿಸಿಸಿಐ ಆಡಳಿತ ಮಂಡಳಿಗೆ ಮೇ 22 ರಂದು ನಿಗದಿಯಾಗಿರುವ ಚುನಾವಣೆಗೆ ತಡೆ ಹಿಡಿಯಬೇಕು. ಆರೋಪ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ದೂರ ಇಡಬೇಕು ಎಂದು ಆಗ್ರಹಿಸಿ ಬಿಹಾರ ಕ್ರಿಕೆಟ್ ಅಸೋಸಿಯೇಶನ್(ಸಿಎಬಿ) ಬುಧವಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ.
ಇದೊಂದು ತ್ವರಿತವಾಗಿ ಇತ್ಯರ್ಥವಾಗಬೇಕಾದ ವಿಷಯವಾಗಿದೆ. ಬಿಸಿಸಿಐ ಚುನಾವಣೆ ಮೇ 22ಕ್ಕೆ ನಿಗದಿಯಾಗಿದೆ. ಚುನಾವಣೆಗೆ 21 ದಿನಗಳು ಮುಂಚಿತವಾಗಿ ನೋಟಿಸ್ ನೀಡಲಾಗಿಲ್ಲ. ಕೆಲವು ಪ್ರಕರಣದಲ್ಲಿ ಚಾರ್ಟ್‌ಶೀಟ್ ಎದುರಿಸುತ್ತಿರುವ ವ್ಯಕ್ತಿಗಳು ಬಿಸಿಸಿಐ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಲೋಧಾ ಸಮಿತಿ ಮಾಡಿರುವ ಶಿಫಾರಸನ್ನು ಜಾರಿಗೊಳಿಸಬೇಕೆಂದು ಆದೇಶ ನೀಡಬೇಕಾಗಿದೆ ಎಂದು ಸಿಎಬಿ ಪರ ನ್ಯಾಯಾಲಯದಲ್ಲಿ ಹಾಜರಾದ ವಕೀಲರು ಹೇಳಿದ್ದಾರೆ.
ಸಿಎಬಿ ಸಲ್ಲಿಸಿದ್ದ ಅರ್ಜಿಯು ಮೊದಲಿಗೆ ಜಸ್ಟಿಸ್ ಎ.ಎಂ. ಸಪ್ರೆ ಹಾಗೂ ಅಶೋಕ ಭೂಷಣ್ ಅವರಿದ್ದ ರಜಾ ಕಾಲದ ನ್ಯಾಯಪೀಠ ಕ್ಕೆ ಸಲ್ಲಿಕೆಯಾಗಿತ್ತು. ಈ ಅರ್ಜಿಯು ಈಗಾಗಲೇ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರಿದ್ದ ನ್ಯಾಯ ಪೀಠದಲ್ಲಿ ವಿಚಾರಣೆಯಾಗಿದೆಯೆಂದು ಹೇಳಿದ್ದ ರಜಾಕಾಲದ ನ್ಯಾಯಪೀಠ ವಿಚಾರಣೆ ನಡೆಸಲು ನಿರಾಕರಿಸಿತು.
70 ವರ್ಷದ ವ್ಯಕ್ತಿಗಳು ಬಿಸಿಸಿಐ ಆಡಳಿತ ಮಂಡಳಿಯಲ್ಲಿ ಅಧಿಕಾರ ಪಡೆಯುವ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ಬಿಸಿಸಿಐ ಅನ್ನು ತರಾಟೆಗೆ ತೆಗೆದುಕೊಂಡಿದೆ.
ಸಿಎಬಿ ಕಾರ್ಯದರ್ಶಿ ಆದಿತ್ಯ ಕುಮಾರ್ ವರ್ಮ ಬಿಸಿಸಿಐಯಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಅವ್ಯವಹಾರದ ವಿರುದ್ಧ ಈ ಹಿಂದೆಯೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಎ.25ರಂದು ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ, ಬಿಸಿಸಿಐ ಕ್ರಿಕೆಟ್‌ನಲ್ಲಿ ಏಕಸ್ವಾಮ್ಯತೆ ಸಾಧಿಸುತ್ತಿದ್ದು, ಧೋನಿ ಹಾಗೂ ಕೊಹ್ಲಿ ಅವರಂತೆ ಆಡಲು ಬಯಸಿರುವ ಯುವ ಕ್ರಿಕೆಟಿಗರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬಿಸಿಸಿಐ ಸಮಾನ ಅವಕಾಶ ನೀಡುತ್ತಿಲ್ಲ ಎಂದು ತೀರ್ಪು ನೀಡಿತ್ತು.







