ನೀಲ್ ಬೌನ್ಸರ್‌ಗೆ ಬೈಲಿ ಬಚಾವ್

ನೆಲಕ್ಕೆ ಉರುಳಿದ ಹೆಲ್ಮೆಟ್
ವಿಶಾಖಪಟ್ಟಣ,ಮೇ 18: ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್‌ನ ವೇಗದ ಬೌಲರ್ ನಥನ್ ಕೌಲ್ಟರ್-ನೀಲ್ ಎಸೆದ ಟ್ರಕ್‌ನಷ್ಟೇ ವೇಗವಾಗಿ ಬಂದ ಬೌನ್ಸರ್ ಆಸ್ಟ್ರೇಲಿಯದ ದಾಂಡಿಗ ಬ್ಯಾಟ್ಸ್‌ಮನ್ ಜಾರ್ಜ್ ಬೈಲಿ ಧರಿಸಿದ್ದ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ಅದೃಷ್ಟವಶಾತ್ ಬೈಲಿ ಅಪಾಯದಿಂದ ಪಾರಾದರು.
ಪುಣೆ ತಂಡವನ್ನು ಪ್ರತಿನಿಧಿಸುತ್ತಿರುವ ಬೈಲಿ ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ತಮ್ಮದೇ ದೇಶದ ಕೌಲ್ಟರ್ ನೀಲ್ ಎಸೆದ ಚೆಂಡನ್ನು ಆಡಲು ಮುಂದಾದಾಗ ಅದು ಅವರ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ಪರಿಣಾಮ ಹೆಲ್ಮೆಟ್ ಮೈದಾನಕ್ಕೆ ಉರುಳಿಬಿದ್ದಿತ್ತು.
‘‘ನನಗಿಂತಲೂ ಟಿವಿ ವೀಕ್ಷಕರು ಚೆಂಡು ತನ್ನ ಹೆಲ್ಮೆಟ್‌ಗೆ ಬಡಿದ ದೃಶ್ಯವನ್ನು ಚೆನ್ನಾಗಿ ನೋಡಿದ್ದಾರೆ. ನನಗೆ ಟ್ರಕ್‌ವೊಂದು ಬಡಿದ ಅನುಭವವಾಯಿತು. ಆ ಚೆಂಡು ತುಂಬಾ ವೇಗದಲ್ಲಿತ್ತು. ನನ್ನ ತಲೆಯಲ್ಲಿ ಹೆಲ್ಮೆಟ್ ಇದ್ದ ಕಾರಣ ಬಚಾವಾದೆನೆಂಬ ಖುಷಿ ನನ್ನಲ್ಲಿದೆ’’ಎಂದು ಬೈಲಿ ತಿಳಿಸಿದರು.
ಉರುಳಿ ಬಿದ್ದ ಹೆಲ್ಮೆಟ್ ಸ್ಟಂಪ್‌ಗೆ ತಾಗಿಲ್ಲವಲ್ಲ ಎಂದು ಕೆಲವರು ಬೇಸರಪಟ್ಟರು. ಕೆಲವರಂತೂ ಹಾಗೇನಾದರೂ ಆಗಿದೆಯೇ ಎಂದು ಪರೀಕ್ಷೆ ನಡೆಸಿದರು ಎಂದು ಮಂಗಳವಾರ ನಡೆದ ಅಹಿತಕರ ಘಟನೆಯ ಬಗ್ಗೆ ಬೈಲಿ ತಮಾಷೆ ಮಾಡಿದರು.







