ಕೇವಲ 2 ವರ್ಷಗಳಲ್ಲಿ 1,159 ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದುಗೊಳಿಸಿದ ಮೋದಿ ಸರಕಾರ

ನವದೆಹಲಿ :ಕೆಲವೊಂದು ಹೊಸ ಕಾನೂನುಗಳು ಹಾಗೂ ಮಸೂದೆಗಳಿಗೆ ರಾಜ್ಯಸಭೆಯ ಅನುಮೋದನೆ ಪಡೆಯಲು ನರೇಂದ್ರ ಮೋದಿ ಸರಕಾರ ಹೆಣಗಾಡುತ್ತಿರುವುದು ನಿಜವಾಗಿದ್ದರೂ ಹಳೆಯ ಹಾಗೂ ಬಳಕೆಯಲ್ಲಿಲ್ಲದ ಕೆಲವೊಂದು ಕಾನೂನುಗಳನ್ನುಕಾನೂನು ಪುಸ್ತಕದಿಂದ ತೊಡೆದು ಹಾಕುವ ಸರಕಾರದ ಕಾರ್ಯ ಯಾವುದೇ ತೊಡಕಿಲ್ಲದೆ ಮುಂದುವರಿಯುತ್ತಿದೆ.
ಕಳೆದ 64 ವರ್ಷಗಳಲ್ಲಿ ವಿವಿಧ ಸರಕಾರಗಳು ಸುಮಾರು 1,301 ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದುಗೊಳಿಸಿದ್ದರೆ, ಮೋದಿ ಸರಕಾರ ಕಳೆದ ಎರಡು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ 1,159 ಅಂತಹ ಕಾನೂನುಗಳಿಂದ ಕೈತೊಳೆದುಕೊಂಡಿದೆ.
ಇತ್ತೀಚೆಗೆ ಅಂತ್ಯಗೊಂಡ ಬಜೆಟ್ ಅಧಿವೇಶನದಲ್ಲಿ 1.053 ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದುಗೊಳಿಸುವ ಎರಡು ಮಸೂದೆಗಳನ್ನು ರಾಜ್ಯಸಭೆ ಅಂಗೀಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಅಪ್ರಾಪ್ರಿಯೇಶನ್ ಆಕ್ಟ್ಸ್ (ರಿಪೀಲ್) ಬಿಲ್ 2015 758 ಹಳೆಯ ಕಾನೂನುಗಳನ್ನು ರದ್ದುಗೊಳಿಸುವುದಾದರೆ, ಇನ್ನೊಂದು ಮಸೂದೆ-ರಿಪೀಲಿಂಗ್ ಎಂಡ್ ಅಮೆಂಡಿಂಗ್(ಮೂರನೇ) ಬಿಲ್ 2015 295 ಕಾಯಿದೆಗಳನ್ನು ರದ್ದುಪಡಿಸಲಿದೆ.
ಕೆಲವೊಂದು ಸಂದರ್ಭಗಳಲ್ಲಿ ವನ್ಯ ಪ್ರಾಣಿಗಳನ್ನು ಕೊಲ್ಲುವ ಅಥವಾ ಸೆರೆಹಿಡಿಯಲು ಅನುಮತಿಸುವ ಕಾನೂನು, ಕುಷ್ಠರೋಗಿಗಳ ವಿಂಗಡಣೆ ಮತ್ತು ಚಿಕಿತ್ಸೆ, ಕೈದಿಗಳ ವಿನಿಮಯಕ್ಕಾಗಿ ಪಾಕಿಸ್ತಾನದೊಂದಿಗೆ ಒಪ್ಪಂದ, ಬಂಗಾಳ, ಅಸ್ಸಾಂ ಹಾಗೂ ಪಂಜಾಬಿನ ನ್ಯಾಯಾಲಯಗಳನ್ನು ಪಾಕಿಸ್ತಾನಕ್ಕೆ ವಲಸೆ ಹೋದವರಿಗೆ ಬಳಸಲು ಅವಕಾಶ ನೀಡುವ ಮುಂತಾದ ಕಾನೂನುಗಳನ್ನು ರದ್ದು ಪಡಿಸಲಾಗಿದೆ.







