ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನೀರು, ಊಟ ಸಿಗದೆ ಒದ್ದಾಡಿದ ಪ್ರಯಾಣಿಕರು
ಕ್ಯಾಂಟೀನ್‌ನಲ್ಲಿ ಸಿಂಗಲ್ ಇಡ್ಲಿಗೆ 13 ರೂ.!
.jpg)
ಮಂಗಳೂರು, ಮೇ 19: ಇಂದು ನಡೆದ ಬಂದ್ ವೇಳೆ ಹೋಟೆಲ್‌ಗಳು ಬಂದ್ ಆಗಿದ್ದ ಪರಿಣಾಮ ಬಂದ್‌ನಲ್ಲಿ ಸಿಲುಕಿಕೊಂಡವರಿಗೆ ಒಂದೆಡೆ ಹೋಗಲು ಬಸ್ ಇಲ್ಲದೆ ಸಮಸ್ಯೆಯಾದರೆ ಮತ್ತೊಂದೆಡೆ ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿಯೂ ಬಂದ್ ಮಾಹಿತಿಯಿಲ್ಲದೆ ನಗರಕ್ಕೆ ಬಂದಿದ್ದ ಉತ್ತರ ಕರ್ನಾಟಕ ಭಾಗದ ಜನರು ಸಾಕಷ್ಟು ಸಮಸ್ಯೆಯನ್ನು ಅನುಭವಿಸಬೇಕಾಯಿತು. ಸಣ್ಣ ಸಣ್ಣ ಮಕ್ಕಳೊಂದಿಗೆ ಮಂಗಳೂರಿಗೆ ಬಂದಿದ್ದ ಉತ್ತರ ಕರ್ನಾಟಕದ ಬಡಕುಟುಂಬಗಳಿಗೆ ಬಸ್ ನಿಲ್ದಾಣದಲ್ಲಿ ಕುಡಿಯಲು ನೀರು, ತಿಂಡಿ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ನಾನು ಜಾರ್ಖಂಡ್‌ನಿಂದ ಇಂದು ಮುಂಜಾನೆ ಬಂದಿದ್ದೇನೆ. ನನಗೆ ಬಜ್ಪೆಗೆ ಹೋಗಬೇಕಾಗಿದೆ. ಇಲ್ಲಿ ಬಂದ್ ಇದೆ ಎಂಬ ಮಾಹಿತಿ ಇರಲಿಲ್ಲ. ಬಸ್ ನಿಲ್ದಾಣದಲ್ಲಿ ಆಹಾರದ ವ್ಯವಸ್ಥೆಯು ಇಲ್ಲ. ಬಂದ್‌ನಿಂದ ತುಂಬಾ ತೊಂದರೆಗೀಡಾಗಿದ್ದೇನೆ.
-ಉಮೇಶ್, ಜಾರ್ಖಂಡ್ ರಾಜ್ಯ ನಿವಾಸಿ
ಬಿಜಾಪುರದಿಂದ ಬುಧವಾರ ಸಂಜೆ 4 ಗಂಟೆಗೆ ಹೊರಟ ಬಸು ಇಂದು ಮುಂಜಾನೆ 6 ಗಂಟೆಗೆ ಮಂಗಳೂರಿಗೆ ತಲುಪಿದೆ. ನಾವು 4 ಗಂಡಸರು, 4 ಹೆಂಗಸರು ಮತ್ತು 4 ಮಕ್ಕಳ ಜೊತೆ ಬಂದಿದ್ದೇವೆ. ಕಾಸರಗೋಡಿನಲ್ಲಿ ಕಲ್ಲುಕೋರೆಯ ಕೆಲಸಕ್ಕೆ ನಾವು ಹೋಗಬೇಕಾಗಿದೆ. ಬಂದ್ ಬಗ್ಗೆ ಮಾಹಿತಿಯಿರಲಿಲ್ಲ. ಇಲ್ಲಿ ನಮಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ.
-ಅಶೋಕ್, ಬಿಜಾಪುರ
ಮಂಗಳೂರಿನಲ್ಲಿ ಕೆಲಸಕ್ಕೆಂದು ಇಂದು 8 ಮಂದಿ ಬಂದಿದ್ದೇವೆ. ನಮ್ಮ ಜೊತೆ ಕೂಸು ಕೂಡ ಇದೆ. ಕುಡಿಯಲು ನೀರು ಸಿಕ್ಕಿಲ್ಲ, ತಿನ್ನಲು ಆಹಾರವು ಸಿಕ್ಕಿಲ್ಲ. ಇಲ್ಲಿ ಇರುವ ಕ್ಯಾಂಟಿನ್‌ನಲ್ಲಿ ಸಿಂಗಲ್ ಇಡ್ಲಿಗೆ 13 ರೂಪಾಯಿ ಹೇಳುತ್ತಿದ್ದಾರೆ. ಮನೆಯವರೆಲ್ಲರೂ ಹಸಿದು ಕೂತಿದ್ದೇವೆ.
-ಹನುಮಂತ, ಸಿಂಧನೂರು ನಿವಾಸಿ







