ಮಂಜೇಶ್ವರ: ಮರು ಮತ ಎಣಿಕೆಯಲ್ಲೂ ಯುಡಿಎಫ್ ಅಭ್ಯರ್ಥಿಗೆ ಗೆಲುವು

ಮಂಜೇಶ್ವರ, ಮೇ 19: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಕುರಿತಂತೆ ಮರು ಮತ ಎಣಿಕೆಗೆ ಬಿಜೆಪಿ ಮನವಿ ಸಲ್ಲಿಸಿದ್ದು, ಮರು ಎಣಿಕೆಯಲ್ಲೂ ಯುಡಿಎಫ್ ಅಭ್ಯರ್ಥಿ ಪಿ.ಬಿ. ಅಬ್ದುರ್ರಝಾಕ್ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಹಾಗೂ ಯುಡಿಎಫ್ ಮಧ್ಯೆ ತೀವ್ರ ಸ್ಪರ್ಧೆಯಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಹಾಲಿ ಶಾಸಕ ಅಬ್ದುಲ್ ರಝಾಕ್ 56,870 ಮತ ಪಡೆದಿದ್ದರು. ಬಿಜೆಪಿಯ ಕೆ. ಸುರೇಂದ್ರನ್ 56781 ಮತಗಳನ್ನು ಪಡೆದಿದ್ದರು. ಅಬ್ದುರ್ರಝಾಕ್ ಅವರು ಕೇವಲ 89 ಮತಗಳ ಅಂತರದಲ್ಲಿ ವಿಜಯಿಯಾಗಿದ್ದರಿಂದ ಬಿಜೆಪಿಯು ಮರು ಮತ ಎಣಿಕೆ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ನೀಡಿತ್ತು.
ಬಿಜೆಪಿ ನೀಡಿದ ಮನವಿಯಂತೆ ಮರು ಎಣಿಕೆ ನಡೆದಿದ್ದು, ಅಂಚೆಮತಗಳ ಪುನರ್ ಎಣಿಕೆ ಮಾಡಲಾಯಿತು. ಮರು ಎಣಿಕೆಯಲ್ಲೂ ಪಿ.ಬಿ. ಅಬ್ದುರ್ರಝಾಕ್ ಬಿಜೆಪಿಯ ಅಭ್ಯಥಿ ಸುರೇಂದ್ರನ್ ವಿರುದ್ಧ 89 ಮತಗಳ ಅಂತರದಲ್ಲಿ ಗೆದ್ದಿರುವುದು ಧ್ರಡಪಟ್ಟಿತು. ಈ ಹಿನ್ನೆಲೆಯಲ್ಲಿ ಯುಡಿಎಫ್ ಅಭ್ಯರ್ಥಿ ಪಿ.ಬಿ. ಅಬ್ದುರ್ರಝಾಕ್ ಅವರನ್ನು ವಿಜೇತ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು.





