ಕಾಸರಗೋಡು: ವಿಜಯೋತ್ಸವ ವೇಳೆ ಹಲವೆಡೆ ಘರ್ಷಣೆ; ಲಾಠಿಚಾರ್ಜ್
.jpg)
ಕಾಸರಗೋಡು, ಮೇ 19: ಕಾಸರಗೋಡು ಜಿಲ್ಲಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಮೂರು ಕ್ಷೇತ್ರಗಳಲ್ಲಿ ಎಲ್‌ಡಿಎಫ್ ಅಭ್ಯರ್ಥಿಗಳು ಹಾಗೂ ಇನ್ನೆರಡು ಕ್ಷೇತ್ರಗಳಲ್ಲಿ ಯುಡಿಎಫ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದ ಕಾಸರಗೋಡು ಸರಕಾರಿ ಕಾಲೇಜಿನ ಆವರಣದಲ್ಲಿ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಜೊತೆಗೆ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ ಎನ್ನಲಾಗಿದೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಲಾಠೀಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಜಿಲ್ಲೆಯ ಕರಂದಕ್ಕಾಡ್ ಎಂಬಲ್ಲಿ ಕೂಡಾ ವಿಜಯೋತ್ಸವ ಸಂದರ್ಭದಲ್ಲಿ ಕಲ್ಲು ತೂರಾಟ ಹಾಗೂ ಘರ್ಷಣೆ ಸಂಭವಿಸಿದೆ ಎನ್ನಲಾಗಿದೆ. ನಗರದ ಹೊಸ ಬಸ್‌ನಿಲ್ದಾಣ ಪರಿಸರದಲ್ಲಿ ಬಿಜೆಪಿ ಹಾಗೂ ಮುಸ್ಲಿಮ್ ಲೀಗ್ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ವಿದ್ಯಾನಗರದಲ್ಲಿ ಘರ್ಷಣೆ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ.
ಆಯಕಟ್ಟಿನ ಪ್ರದೇಶಗಳಲ್ಲಿ ಭದ್ರತೆಗಾಗಿ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.







