ರಿಷಿಕಪೂರ್ ಹೇಳಿಕೆಗೆ ಸೋಶಿಯಲ್ ಮೀಡಿಯದಲ್ಲಿ ಭಾರೀ ಟೀಕೆ
ರಾಜ್‌ಕಪೂರ್, ನೆಹರೂ ಫೋಟೊ ಪೋಸ್ಟ್ ಮಾಡಿದ ಟೀಕಾಕಾರರು!

ಹೊಸದಿಲ್ಲಿ, ಮೇ 19: ಬಾಲಿವುಡ್ ನಟ ರಿಷಿಕಪೂರ್ ದೇಶದ ಯೋಜನೆಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಗಾಂಧಿ ಕುಟುಂಬದ ಹೆಸರಿರುವುದನ್ನುವಿರೋಧಿಸಿ ನೀಡಿದ ಹೇಳಿಕೆ ಸೋಶಿಯಲ್ ಮೀಡಿಯಗಳಲ್ಲಿ ಭಾರೀಟೀಕೆಗಳಿಗೆ ಗುರಿಯಾಗಿದೆ. ಕೆಲವರು ರಿಷಿಕಪೂರ್‌ರನ್ನು ಟೀಕಿಸಿದ್ದಾರೆ. ಕೆಲವರು ಅವರನ್ನು ಬೆಂಬಲಿಸಿದ್ದಾರೆ.
ರಿಷಿಕಪೂರ್‌ರನ್ನು ಟೀಕಿಸಿದವರು ಅವರ ತಂದೆ ನಟ ರಾಜ್‌ಕಪೂರ್ ಮತ್ತು ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಜೊತೆಗಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಕೆಲವರು ರಿಷಿಕಪೂರ್ ಬಳಸಿದ ಭಾಷೆಯನ್ನು ಪ್ರಶ್ನಿಸಿದ್ದಾರೆ. ಒಬ್ಬ ವ್ಯಕ್ತಿ ಟೀಕಿಸುತ್ತಾ ಮೊದಲು ಗೋಮಾಂಸ ತಿಂದು ರಿಷಿಕಪೂರ್ ಮಾತಾಡುತ್ತಿದ್ದರು. ಈಗ ಗೋಮೂತ್ರ ಕುಡಿದು ಮಾತಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಗೋಮಾಂಸ ನಿಷೇಧದ ವಿರುದ್ಧ ಮಾತಾಡಿದ್ದ ರಿಷಿಕಪೂರ್‌ರನ್ನು ಈ ವ್ಯಕ್ತಿ ಹೀಗೆ ಗುರಿ ಮಾಡಿದ್ದಾನೆ.
ರಿಷಿಯನ್ನು ಬೆಂಬಲಿಸುವವರು ಕೂಡಾ ಗೋಮಾಂಸದ ವಿಷಯವನ್ನು ಎತ್ತಿದ್ದಾರೆ. ರಿಷಿಕಪೂರ್ ಗೋಮಾಂಸ ಸೇವನೆ ಬೆಂಬಲಿಸಿದ್ದಾಗ ಕಾಂಗ್ರೆಸ್‌ಅವರ ಬೆಂಬಲಕ್ಕೆ ನಿಂತಿತ್ತು. ಈಗ ಅದು ರಿಷಿ ಕಪೂರ್‌ರ ಹೇಳಿಕೆಯನ್ನು ವಿರೋಧಿಸುತ್ತಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹೆಸರಿನಲ್ಲಿರುವ ಒಂದು ಫೇಸ್‌ಬುಕ್ ಕಮ್ಯುನಿಟಿಯಲ್ಲಿ ದೇಶದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಬರೇ ಎರಡಕ್ಕೆ ಗಾಂಧಿ ಪರಿವಾರದ ಇಬ್ಬರು ಸದಸ್ಯರ ಹೆಸರಿದೆ. ಅವರಿಬ್ಬರೂ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ ಎಂದು ಹೇಳಿದೆ.





