ಪುತ್ತೂರು: ನಗರದಲ್ಲಿ ಮಾತ್ರ ಬಂದ್, ಗ್ರಾಮೀಣ ಭಾಗದಲ್ಲಿ ಇಲ್ಲ

ಪುತ್ತೂರು, ಮೇ 19: ಎತ್ತಿನಹೊಳೆ ಯೋಜನೆ ವಿರೋಧಿಸಿ ಕರೆ ನೀಡಿದ್ದ ಜಿಲ್ಲಾ ಬಂದ್‌ಗೆ ಗುರುವಾರ ಪುತ್ತೂರು ನಗರದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತವಾಗಿದ್ದು, ಗ್ರಾಮೀಣ ಭಾಗದಲ್ಲಿ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಗ್ರಾಮೀಣ ಭಾಗದಲ್ಲಿ ಎಲ್ಲಾ ಅಂಗಡಿಗಳು ಎಂದಿನಂತೆ ತೆರೆದಿತ್ತು. ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಪುತ್ತೂರು ನಗರದಲ್ಲಿ ಬಹುತೇಕ ಅಂಗಡಿಗಳು ತೆರೆದಿದ್ದವು. ಈ ಸಂದರ್ಭದಲ್ಲಿ ಕಾರಿನಲ್ಲಿ ಆಗಮಿಸಿದ ನೇತ್ರಾವತಿ ಉಳಿಸಿ ಸಂಯುಕ್ತ ಸಮಿತಿ ಸದಸ್ಯ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಈ ದಿನದ ಮಟ್ಟಿಗೆ ಅಂಗಡಿಯನ್ನು ಬಂದ್ ಮಾಡುವಂತೆ ವಿನಂತಿಸಿದರು. ಬಳಿಕ ಅಂಗಡಿದಾರರು ತಮ್ಮ ಅಂಗಡಿಗಳನ್ನು ಮುಚ್ಚಿ ತೆರಳಿದರು.
ಬಂದ್ ಕರೆಗೆ ಸ್ಪಂದಿಸಿರುವ ಪುತ್ತೂರು ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ಸು ಚಾಲಕರು ಬಸ್ಸುಗಳನ್ನು ರಸ್ತೆಗಿಳಿಸದೆ ಬೆಂಬಲ ವ್ಯಕ್ತಪಡಿಸಿದರು. ಕಾರು, ಟೆಂಪೋ, ಟ್ಯಾಕ್ಸಿಗಳು ಓಡಾಟ ನಡೆಸದೆ ಬಂದ್‌ಗೆ ಬೆಂಬಲ ನೀಡಿತ್ತು. ಬಿಎಂಎಸ್ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಬಂದ್ ಕರೆಗೆ ಬೆಂಬಲ ವ್ಯಕ್ತ ಪಡಿಸಿತ್ತು. ಆದರೆ ನಗರದಲ್ಲಿ ಇತರ ಸಂಘಟನೆಗಳ ಕೆಲವೊಂದು ಆಟೊಗಳು ಓಡಾಟ ನಡೆಸುತ್ತಿದ್ದವು. ಪುತ್ತೂರು ನಗರದ ದರ್ಬೆಯಿಂದ ಬೊಳುವಾರು ತನಕ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು.
ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಪಾಣಾಜೆ, ಕುಂಬ್ರ, ಈಶ್ವರಮಂಗಲ, ಕಾವು ಮತ್ತಿತರ ಕಡೆಗಳಲ್ಲಿ ಅಂಗಡಿಗಳು ಎಂದಿನಂತೆ ತೆರೆದು ವ್ಯಾಪಾರ ನಡೆಸುತ್ತಿದ್ದರು. ಬಸ್ಸುಗಳು ಓಡಾಟ ನಡೆಸದ ಕಾರಣ ನಗರದಲ್ಲಿ ಜನಸಂಚಾರ ವಿರಳವಾಗಿತ್ತು. ಬಂದ್‌ನ ಪರಿಣಾಮ ಜನರು ಅನ್ನ ಆಹಾರಕ್ಕಾಗಿ ಪರದಾಡುವಂತಾಗಿತ್ತು. ಎಲ್ಲಾ ಹೊಟೇಲ್‌ಗಳು ಬಂದ್ ಆಗಿದ್ದ ಕಾರಣ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳೂ ಊಟವಿಲ್ಲದೆ ಪರದಾಡುವಂತಾಯಿತು.
ಒಂದೇ ಅಂಗಡಿ ಓಪನ್
ಪುತ್ತೂರು ನಗರದ ಅರುಣಾ ಚಿತ್ರ ಮಂದಿರದ ಬಳಿ ಇರುವ ಸೂತ್ರಬೆಟ್ಟು ಜಗನ್ನಾಥ್ ರೈ ಅವರಿಗೆ ಸೇರಿದ ಜವುಳಿ ಅಂಗಡಿ ಬಂದ್ ಮಾಡದೇ ತೆರೆದುಕೊಂಡಿತ್ತು. ಬಲಾತ್ಕಾರದ ಬಂದ್‌ಗೆ ನನ್ನ ಬೆಂಬಲ ಇಲ್ಲ ಎಂದು ಅಂಗಡಿಯ ಮುಂದೆ ನಾಮಪಲಕವನ್ನು ಹಾಕಿಕೊಂಡಿರುವ ಅವರು ಎಂದಿನಂತೆ ವ್ಯವಹಾರ ನಡೆಸುತ್ತಿದ್ದರು.







