ಉಪ್ಪಿನಂಗಡಿ: ಜಿಲ್ಲಾ ಬಂದ್‌ಗೆ ಭಾಗಶಃ ಪ್ರತಿಕ್ರಿಯೆ
.jpg)
ಉಪ್ಪಿನಂಗಡಿ, ಮೇ 19: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ಗುರುವಾರ ಕರೆ ನೀಡಿದ್ದ ಬಂದ್‌ಗೆ ಉಪ್ಪಿನಂಗಡಿಯಲ್ಲಿ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಶಾಂತಿಯುತವಾಗಿ ನಡೆದಿದೆ.
ಉಪ್ಪಿನಂಗಡಿಯಲ್ಲಿ ಹೆಚ್ಚಿನ ಅಂಗಡಿಗಳು ಬೆಳಗ್ಗಿನಿಂದಲೇ ಮುಚ್ಚಿದ್ದು, ಬೆರಳೆಣಿಕೆಯ ಅಂಗಡಿಗಳಷ್ಟೇ ತೆರೆದಿದ್ದವು. ಬಳಿಕ ವ್ಯಾಪಾರವಿಲ್ಲದೆ ಮತ್ತೆ ಕೆಲವು ಅಂಗಡಿಗಳು ಮುಚ್ಚಿದವು. ಖಾಸಗಿ ಹಾಗೂ ಸರಕಾರಿ ಬಸ್‌ಗಳ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಕೆಲವು ಅಟೊ ರಿಕ್ಷಾಗಳು, ಜೀಪುಗಳು ಬಾಡಿಗೆ ನಡೆಸುತ್ತಿದ್ದವು. ಟೂರಿಸ್ಟ್ ವಾಹನಗಳು ರಸ್ತೆಗಿಳಿಯಲೇ ಇಲ್ಲ. ಆದರೆ ಬೈಕ್, ಕಾರು ಸೇರಿದಂತೆ ಖಾಸಗಿ ವಾಹನಗಳು ನಿರಾಂತಕವಾಗಿ ಓಡಾಟ ನಡೆಸುತ್ತಿದ್ದವು.
ನಾಗರಿಕರ ಓಡಾಟವೂ ಪಟ್ಟಣದಲ್ಲಿ ಕಡಿಮೆಯಿದ್ದು, ಜನಸಂದಣಿ, ವಾಹನ ಸಂದಣಿಯಿಲ್ಲದೆ ಪಟ್ಟಣದ ರಸ್ತೆ, ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಬೆಳಗ್ಗೆ ಶೇ.20ರಷ್ಟು ಅಂಗಡಿಗಳು ತೆರೆದಿದ್ದರೂ, ವ್ಯಾಪಾರವಿಲ್ಲದೆ ಮತ್ತೆ ಶೇ.10ರಷ್ಟು ಅಂಗಡಿಗಳ ವ್ಯಾಪಾರಸ್ಥರು ಬಂದ್ ಮಾಡಿ ತೆರಳಿದರು. ಹೊಟೇಲ್‌ನವರು ಕೆಲವರು ಮಾತ್ರ ಬಂದ್ ಮಾಡಿದ್ದರು. ಉಳಿದಂತೆ ಹೆಚ್ಚಿನ ಹೊಟೇಲ್‌ಗಳು ವ್ಯಾಪಾರ ನಡೆಸುತ್ತಿರುವುದು ಕಂಡು ಬಂತು. ಆದರೂ ಗ್ರಾಹಕರಿಲ್ಲದೆ ವ್ಯಾಪಾರವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪೆರಿಯಡ್ಕ ಬಳಿಯ ಓಡ್ಲದ ಬಳಿ ರಸ್ತೆಯಲ್ಲಿ ಗುರುವಾರ ಬೆಳ್ಳಂಬೆಳಗೆಯೇ ಟಯರ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದರು. ಟಯರ್‌ಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಇನ್ನುಳಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.
ಉಪ್ಪಿನಂಗಡಿ ಸಮೀಪದ 34ನೆ ನೆಕ್ಕಿಲಾಡಿಯಲ್ಲಿ ವಾರದ ಸಂತೆ ನಡೆದರೂ ಎಂದಿನಂತೆ ಗ್ರಾಹಕರಿಲ್ಲದೆ ಸಂತೆಗೆ ಬಂದಿದ್ದ ವ್ಯಾಪಾರಸ್ಥರಿಗೂ ವ್ಯಾಪಾರವಾಗದ ಸ್ಥಿತಿ ನಿರ್ಮಾಣವಾಗಿತ್ತು. ಕೆಲವು ಬ್ಯಾಂಕ್‌ಗಳು ಬೆಳಗ್ಗಿನಿಂದಲೇ ಮುಚ್ಚಲ್ಪಟ್ಟಿದ್ದರೆ, ಮತ್ತೆ ಕೆಲವು ಬ್ಯಾಂಕ್‌ಗಳನ್ನು ಮತ್ತೆ ಮುಚ್ಚಲಾಯಿತು. ಒಂದೆರಡು ಬ್ಯಾಂಕ್‌ಗಳು ತೆರೆದಿದ್ದರೂ, ಸಿಬ್ಬಂದಿಯ ಗೈರು ಹಾಜರಿ ಹಾಗೂ ಗ್ರಾಹಕರ ಕೊರತೆಯಿಂದ ವ್ಯವಹಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ಉಪ್ಪಿನಂಗಡಿ ಪಟ್ಟಣವನ್ನು ಹೊರತುಪಡಿಸಿದರೆ, ಗ್ರಾಮಾಂತರ ಪ್ರದೇಶಗಳಾದ ಪುಳಿತ್ತಡಿ, ಪೆರಿಯಡ್ಕ, ನೆಕ್ಕಿಲಾಡಿ, ಕರಾಯ, ತಣ್ಣೀರುಪಂಥ ಮುಂತಾದ ಕಡೆ ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು.
ಬಂದ್ ಸಂದರ್ಭ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿದ್ದು, ಹೆಚ್ಚುವರಿಯಾಗಿ ಓರ್ವ ಅಡಿಷನಲ್ ಎಸ್ಪಿ, ಓರ್ವ ವೃತ್ತ ನಿರೀಕ್ಷಕ, ಓರ್ವ ಪೊಲೀಸ್ ಸಬ್ ಇನ್‌ಸ್ಪೆಕ್ಟರ್, 20 ಪೊಲೀಸ್ ಸಿಬ್ಬಂದಿ, ಎಂಟು ಮಂದಿ ಹೋಂಗಾರ್ಡ್ ಹಾಗೂ ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ಬಂದೋಬಸ್ತ್‌ಗೆ ನೇಮಿಸಿತ್ತು. ಇವರಲ್ಲದೆ ಉಪ್ಪಿನಂಗಡಿ ಠಾಣೆಯಲ್ಲಿರುವ ಪ್ರೊಬೆಷನರಿ ಎಎಸ್ಪಿ, ವೃತ್ತ ನಿರೀಕ್ಷಕರು ಹಾಗೂ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿಯೂ ಬಂದೋಬಸ್ತ್‌ನ ಜವಾಬ್ದಾರಿ ವಹಿಸಿದ್ದರು. ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.







