ಭಾರೀ ಗಾಳಿಗೆ ಮರದೊಂದಿಗೆ ಧರೆಗುರುಳಿದ ವ್ಯಕ್ತಿ ಮೃತ್ಯು
ಬಂಟ್ವಾಳ, ಮೇ 19: ಮರ ಹತ್ತಿ ಗೆಲ್ಲು ಕಡಿಯುತ್ತಿದ್ದ ವೇಳೆ ಬೀಸಿದ ಭಾರೀ ಗಾಳಿಗೆ ಮರ ಧರೆಗುರುಳಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಗುರುವಾರ ನಡೆದಿದೆ.
ಮೃತರನ್ನು ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ನಿವಾಸಿ ಸೇಸಪ್ಪ ಪೂಜಾರಿ(50) ಎಂದು ಗುರುತಿಸಲಾಗಿದೆ.
ತಮ್ಮ ತೋಟಕ್ಕೆ ಬುಡಕ್ಕೆ ಸೊಪ್ಪು ಹಾಕಲು ಮನೆಯ ಸಮೀಪವೇ ಇದ್ದ ಮರಕ್ಕೆ ಹತ್ತಿ ಅವರು ರೆಂಬೆಗಳನ್ನು ಕಡಿಯುತ್ತಿದ್ದರು. ಈ ಸಂದರ್ಭ ಬೀಸಿದ ಭಾರೀ ಗಾಳಿಗೆ ಅವರು ಹತ್ತಿದ ಮರ ಧರೆಗೆ ಉರುಳಿದೆ. ಮರದೊಂದಿಗೆ ಅವರೂ ಕೆಳಗೆ ಬಿದ್ದು ಗಂಭೀರಗೊಂಡಿದ್ದರು. ತಕ್ಷಣ ಅವರನ್ನು ವಿಟ್ಲದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಸುಜಯ ಹಾಗೂ ಗ್ರಾಮ ಕರಣಿಕ ವೈಶಾಲಿ, ವಿಟ್ಲ ಎಸ್ಸೈ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರು ಕೂಲಿ ಕೆಲಸ ಮಾಡುತ್ತಿದ್ದು, ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.







