ದ.ಕ ಜಿಲ್ಲಾ ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ
.jpg)
ಮಂಗಳೂರು, ಮೇ 19: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಯಾದ ನೇತ್ರಾವತಿ ನದಿ ಹರಿವಿಗೆ ಅಡ್ಡಿಯನ್ನುಂಟುಮಾಡುವ ಎತ್ತಿನಹೊಳೆ ಯೋಜನೆ ವಿರೋಧಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ಸ್ವಯಂಪ್ರೇರಿತ ಬಂದ್‌ಗೆ ಮಂಗಳೂರು ನಗರದಲ್ಲಿ ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ಕರೆಗೆ ಬೆಂಬಲ ವ್ಯಕ್ತಪಡಿಸಿದ ಬಸ್ ಚಾಲಕರು ಇಂದು ಮುಂಜಾನೆಯಿಂದಲೆ ಬಸ್‌ಗಳನ್ನು ರಸ್ತೆಗಿಳಿಸಲಿಲ್ಲ. ಉಡುಪಿ ಜಿಲ್ಲೆಗೆ ಹೋಗುವ ಎಕ್ಸ್ ಪ್ರೆಸ್ ಬಸ್ಸುಗಳು ಸೇರಿದಂತೆ ಸರ್ವಿಸ್ ಬಸ್‌ಗಳು ಸಂಚಾರವನ್ನು ಸ್ಥಗಿತಗೊಳಿಸಿದ್ದರೆ ನಗರದಲ್ಲಿ ಸಂಚರಿಸುವ ಸಿಟಿಬಸ್‌ಗಳ ಚಾಲಕರು ಬಂದ್‌ಗೆ ಬೆಂಬಲ ಸೂಚಿಸಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದರು. ಪರಿಣಾಮ ಬಸ್ ಸಂಚಾರವಿಲ್ಲದೆ ಜನರಿಗೆ ಸಂಚಾರಕ್ಕೆ ತೊಡಕುಂಟಾಯಿತು. ನಗರದ ಸರ್ವಿಸ್ ಬಸ್ ನಿಲ್ದಾಣ, ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು.
ಕೆಎಸ್ಸಾರ್ಟಿಸಿ ಬಸ್‌ಗಳು ಮುಂಜಾನೆ ಬಸ್‌ಗಳ ಓಡಾಟವನ್ನು ನಡೆಸಿದ್ದರೂ ಕೂಡ ಕೆಲವೆಡೆ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಕಲ್ಲುತೂರಾಟ ನಡೆಸಿದ ಹಿನ್ನೆಲೆಯಲ್ಲಿ ಸಂಜೆಯವರೆಗೆ ಬಸ್ ಸಂಚಾರವನ್ನು ಮೊಟಕುಗೊಳಿಸಿತು. ಮುಂಜಾನೆ ಬೆಂಗಳೂರು, ಮೈಸೂರು, ರಾಯಚೂರು ಸೇರಿದಂತೆ ವಿವಿಧ ಭಾಗಗಳಿಂದ ಬರುವ ಬಸ್‌ಗಳು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ತಲುಪಿದ ನಂತರ ಮುಂದಿನ ಸಂಚಾರವನ್ನು ಸ್ಥಗಿತಗೊಳಿಸಿತು.
ಬಂದ್‌ಗೆ ಹಲವಾರು ರಿಕ್ಷಾ ಸಂಘಟನೆಗಳು ಬೆಂಬಲ ಸೂಚಿಸಿದ್ದ ಹಿನ್ನೆಲೆಯಲ್ಲಿ ಕೆಲವೇ ಸಂಖ್ಯೆಯ ರಿಕ್ಷಾಗಳು ಸಂಚಾರದಲ್ಲಿ ತೊಡಗಿಸಿಕೊಂಡಿದ್ದವು. ಕೆಲವು ರಿಕ್ಷಾ ಚಾಲಕರು ದುಬಾರಿ ದರಗಳನ್ನು ವಸೂಲು ಮಾಡುತ್ತಿದ್ದಾರೆ ಎಂಬ ಆರೋಪವು ಕೇಳಿಬಂದಿತ್ತು.
ವಿವಿಧ ಧಾರ್ಮಿಕ , ಸಾಮಾಜಿಕ ಸಂಘಟನೆಗಳು, ವ್ಯಾಪಾರಿಗಳು ಬಂದ್‌ಗೆ ಬೆಂಬಲ ಸೂಚಿಸಿದ್ದರು. ನಗರದ ಅಂಗಡಿ ಮುಂಗಟ್ಟುಗಳು, ಹೋಟೆಲ್, ಮಾಲ್, ಚಿತ್ರಮಂದಿರ, ಬಂದರ್, ಸೆಂಟ್ರಲ್ ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು.
ಕೆಲವೆಡೆ ಬಲವಂತದ ಬಂದ್!
ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯು ಕರೆ ನೀಡಿದ ಸ್ವಯಂಪ್ರೇರಿತ ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕೆಲವೆಡೆ ಬಲವಂತದ ಬಂದ್ ನಡೆಸಲಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿದ್ದ ಹೋಟೆಲನ್ನು ಬಲವಂತವಾಗಿ ಬಂದ್ ಮಾಡಿಸಲಾಗಿತ್ತು. ಇನ್ನು ಕೆಲವೆಡೆ ಬಲವಂತದ ಬಂದ್ ನಡೆದಿರುವ ಬಗ್ಗೆಯೂ ಆರೋಪ ಕೇಳಿಬಂದಿದೆ.
ಬಸ್‌ಗಳಿಗೆ ಕಲ್ಲು, ಟೈರ್‌ಗಳಿಗೆ ಬೆಂಕಿ
ಮುಂಜಾನೆ 5 ಗಂಟೆಯ ಸುಮಾರಿಗೆ ನಗರದ ಕೆಲವಡೆ ರಸ್ತೆಯಲ್ಲಿ ಟಯರಿಗೆ ಬೆಂಕಿ ಹಚ್ಚಿದ ಘಟನೆಯು ನಡೆದಿದೆ. ತೊಕ್ಕೊಟ್ಟು, ಎಕ್ಕೂರು, ಕಾರ್‌ಸ್ಟ್ರೀಟ್ ಗಳಲ್ಲಿ ಟಯರ್‌ಗೆ ಬೆಂಕಿ ಹಚ್ಚಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೂಡಲೇ ಅದನ್ನು ತೆರವುಗೊಳಿಸಿದ್ದರು.
ಬಂದ್ ವೇಳೆ ನಗರದಲ್ಲಿ ಮೂರು ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಕಲ್ಲೆಸೆದ ಘಟನೆಯು ನಡೆದಿದೆ. ಜ್ಯೋತಿ ವೃತ್ತದ ಬಳಿ ಒಂದು ಕೆಎಸ್ಸಾರ್ಟಿಸಿ ವೋಲ್ವೊ ಬಸ್ ಮತ್ತು ಪಂಪ್‌ವೆಲ್ ಬಳಿ ಎರಡು ಕೆಎಸ್ಸಾರ್ಟಿಸಿ ನಗರ ಸಾರಿಗೆ ಬಸ್‌ಗಳ ಮೇಲೆ ಕಲ್ಲು ಎಸೆದ ಪರಿಣಾಮ ಬಸ್‌ಗಳಿಗೆ ಹಾನಿಯಾಗಿದೆ.
ಖಾಸಗಿ ವಾಹನಗಳ ಓಡಾಟ ನಿರಾತಂಕ
ಇಂದು ನಡೆದ ಬಂದ್ ವೇಳೆ ಬಸ್, ರಿಕ್ಷಾಗಳ ಓಡಾಟ ನಿಂತಿದ್ದರೂ ಖಾಸಗಿ ವಾಹನಗಳು ನಿರಾತಂಕವಾಗಿ ಚಲಿಸಿದವು. ಖಾಸಗಿ ಸಂಸ್ಥೆಗಳ ವಾಹನಗಳು, ಕಾರು, ಬೈಕುಗಳ ಓಡಾಟ ಸಾಮಾನ್ಯವಾಗಿತ್ತು. ವಾಹನಗಳಿಲ್ಲದೆ ಜನರು ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಂತೂರು, ಲಾಲ್‌ಭಾಗ್‌ನಲ್ಲಿ ರಸ್ತೆ ತಡೆ
ಬಂದ್ ವೇಳೆ ನಗರದ ನಂತೂರು ಮತ್ತು ಲಾಲ್‌ಭಾಗ್‌ನಲ್ಲಿ ರಸ್ತೆ ತಡೆ ನಡೆಸಲಾಯಿತು. ನಂತೂರಿನಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ನಾಲ್ಕೂ ಕಡೆಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಲಾಯಿತು. ಲಾಲ್‌ಭಾಗ್‌ನಲ್ಲಿ ಮೂರು ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ನೇತ್ರವಾತಿ ರಕ್ಷಣಾ ಸಂಯುಕ್ತ ಸಮಿತಿಯ ಅಧ್ಯಕ್ಷ ವಿಜಯ್‌ಕುಮಾರ್ ಶೆಟ್ಟಿ, ಸರ್ವಧರ್ಮಿಯರು, ವಿವಿಧ ಸಂಘಟನೆಗಳು ಒಟ್ಟಾಗಿ ಕರೆ ನೀಡಿದ ಬಂದ್ ಯಶಸ್ವಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ತವರೂರಿನಲ್ಲಿಯೂ ಬಂದ್‌ಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸರಕಾರಕ್ಕೆ ನಮ್ಮ ಕೂಗು ಇನ್ನು ಕೇಳಿಸುತ್ತಿಲ್ಲ. ಇದಕ್ಕೆ ಸ್ಪಂದಿಸದಿದ್ದರೆ ಇನ್ನು ತೀವ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.







