ಕಳವು ಆರೋಪಿ ಮೇಲೆ ಹಲ್ಲೆ: ದೂರು; ಪ್ರತಿದೂರು
ಮಂಗಳೂರು, ಮೇ 19: ಹಣ ಕಳವು ಮಾಡಿದ್ದಾನೆಂದು ಆರೋಪಿಸಿ ತಂಡವೊಂದು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಳ್ಳಾಲ ಮೇಲಂಗಡಿ ಎರಡನೇ ಗೇಟ್ ಬಳಿ ನಿವಾಸಿ ಹಂಝ (22) ಎಂದು ಗುರುತಿಸಲಾಗಿದೆ. ಉಳ್ಳಾಲ ಮೇಲಂಗಡಿಯ ನಿವಾಸಿ ಮುಹಮ್ಮದ್ ಮತ್ತವರ ಪುತ್ರ ಜಾಫರ್ ಹಾಗೂ ಇತರರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಹಣ ಕಳವುಗೈದ ವಿಚಾರಕ್ಕೆ ಸಂಬಂಧಿಸಿ ಬುಧವಾರ ರಾತ್ರಿ ಸುಮಾರು 10 ಗಂಟೆ ಹೊತ್ತಿಗೆ ಮುಹಮ್ಮದ್ ಮತ್ತು ಹಂಝರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಇದು ವಿಕೋಪಕ್ಕೇರಿ ತಂದೆ ಮತ್ತು ಮಗ ಹಾಗೂ ಇತರರು ಹಂಝರ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಗೀರಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮುಹಮ್ಮದ್ ಅವರು ತಮ್ಮ ಮನೆಯ ಮೇಲ್ಭಾಗದಲ್ಲಿ ಲಾಡ್ಜ್‌ಗಳನ್ನು ಮಾಡಿ ಬಾಡಿಗೆಗೆ ನೀಡಿದ್ದು, ಕಟ್ಟಡದಿಂದ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಿಗೆ ಬಿಡುವುದರಿಂದ ಮುಹಮ್ಮದ್‌ರ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ತ್ಯಾಜ್ಯ ಹರಿಯುತ್ತಿದೆ. ಈ ಬಗ್ಗೆ ಹಂಝ ಅವರು ಮುಹಮ್ಮದ್‌ರಿಗೆ ನೀಡಲಾದ ಪರವಾನಿಗೆಯ ಬಗ್ಗೆ ಉಳ್ಳಾಲ ನಗರಸಭೆಯಲ್ಲಿ ಹಲವು ಬಾರಿ ಮಾಹಿತಿ ಹಕ್ಕಿನಡಿ ವಿವರ ಕೇಳಿದ್ದರು. ಈ ಬಗ್ಗೆ ಕೋಪಗೊಂಡ ಮುಹಮ್ಮದ್ ಅವರು ಅಬ್ದುಲ್ ರಹ್ಮಾನ್, ಅನೀಶ್, ಯಾಹ್ಯಾ, ಜಾಫರ್, ಸಾಹಿಲ್, ಸಫ್ವಾನ್ ಎಂಬವರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಹಂಝ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರೆ, ಈ ಬಗ್ಗೆ ಮುಹಮ್ಮದ್ ಎಂಬವರ ಪುತ್ರ ಜಾಫರ್ ಎಂಬವರು ಪ್ರತಿ ದೂರು ನೀಡಿ ಹಂಝ ಅವರು ಹಣ ಕಳವುಗೈದಿದ್ದು, ಈ ಬಗ್ಗೆ ವಿಚಾರಿಸಿದಾಗ ನಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಎಂದು ಆರೋಪಿಸಿದ್ದಾರೆ.
ಬುಧವಾರ ರಾತ್ರಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹಂಝ ಮತ್ತಿತರರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.jpg.jpg)



