ಉಪ್ಪಿನಂಗಡಿ: ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಶನ್‌ನಿಂದ ಸ್ವಚ್ಛತಾ ಕಾರ್ಯಕ್ರಮ
ಬಡಕುಟುಂಬಗಳಿಗೆ ಶೌಚಾಲಯ ಮತ್ತು ಮನೆ ನಿರ್ಮಾಣಕ್ಕೆ ಸಹಾಯಧನ ವಿತರಣೆ

ಉಪ್ಪಿನಂಗಡಿ, ಮೇ 19: ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಶನ್, ಪೆರಿಯಡ್ಕ ಮತ್ತು ಮನ್‌ಬಾಹು ರಹ್ಮಾ ಚಾರಿಟೇಬಲ್ ಟ್ರಸ್ಟ್ ವಾಟ್ಸ್ ಆ್ಯಪ್ ಗ್ರೂಪ್‌ನ ಜಂಟಿ ಆಶ್ರಯದಲ್ಲಿ ಪರಿಸರ ಸ್ವಚ್ಚತಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮತ್ತು ಬಡಕುಟುಂಬಗಳಿಗೆ ಶೌಚಾಲಯ ಮತ್ತು ಮನೆ ನಿರ್ಮಾಣಕ್ಕೆ ಸಹಾಯಧನದ ಚೆಕ್ ವಿತರಣಾ ಸಮಾರಂಭ ಇತ್ತೀಚೆಗೆ ಪೆರಿಯಡ್ಕದ ಎಂ.ಜೆ.ಎಂ ಸಭಾಂಗಣದಲ್ಲಿ ನಡೆಯಿತು.
ಎಂ.ಜೆ.ಎಂ ಪೆರಿಯಡ್ಕದ ಖತೀಬ್ ಝೈನುದ್ದಿನ್ ಯಮಾನಿ ದುಆ ನೆರವೇರಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶುದ್ಧಿ ಈಮಾನಿನ ಭಾಗವಾಗಿದೆ ಎಂಬುವುದನ್ನು 1,400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್ (ಸ.ಅ)ರು ತೋರಿಸಿಕೊಟ್ಟಿರುವುದರಿಂದ ಶುದ್ಧಿಯು ಪ್ರತಿಯೊಬ್ಬ ಮುಸಲ್ಮಾನನ ಆದ್ಯ ಕರ್ತವ್ಯವಾಗಿದೆ. ಅದೇ ರೀತಿ ತನು ಮನ ಧನದ ಮೂಲಕ ಮಾಡುವ ಸಣ್ಣ ಸಹಾಯವು ಆ ವ್ಯಕ್ತಿಯನ್ನು ಸ್ವರ್ಗಕ್ಕೆ ಕೊಂಡೊಯ್ಯಬಹುದು ಎಂಬುವುದನ್ನು ಪ್ರವಾದಿ ಮುಹಮ್ಮದ್ (ಸ.ಅ)ರು ಹೇಳಿರುವರು ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಜತ್ತೂರು ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್, ಸ್ವಚ್ಛತಾ ಕಾರ್ಯಕ್ರಮದ ಮೂಲಕ ಮೋದಿಯ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ತನ್ನದೇ ಆದ ಯೋಗದಾನ ನೀಡುತ್ತಿರುವ ಈ ಸಂಘಟನೆಗಳ ಕಾರ್ಯವೈಖರಿಗೆ ನಾನು ತುಂಬು ಹೃದಯದ ಧನ್ಯವಾದ ಸಮರ್ಪಿಸುತ್ತೇನೆ. ಇಂತಹ ಯುವಕರು ಪ್ರತಿಹಳ್ಳಿಗಳಲ್ಲಿದ್ದರೆ ನಾವು ಗಾಂಧೀಜಿಯವರ ರಾಮ ರಾಜ್ಯ ಕನಸನ್ನು ಈಡೇರಿಸಲು ಸಾಧ್ಯವಿದೆ. ನಮ್ಮ ಮನೆಗಳಲ್ಲಿ ಪೈಪ್ ಕಂಪೋಸ್ಟಿಂಗ್ ಅಳವಡಿಸಿಕೊಳ್ಳುವುದರಿಂದ ಹಸಿಕಸವನ್ನು ನಿವಾರಿಸಿಕೊಂಡು ಈ ಮೂಲಕ ನಾವು ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಬಹುದು ಎಂದರು. ಕಾರ್ಯಕ್ರಮದಲ್ಲಿ ಪೈಪ್ ಕಂಪೋಸ್ಟಿಂಗ್‌ನ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮಹಾಲಿಂಗ, ಭಾಷಣಕ್ಕಿಂತ ಕಾರ್ಯಸಾಧನೆ ಮುಖ್ಯ. ನೀವು ಈ ಲೋಕದಲ್ಲಿ ಮಾಡುವ ಒಳ್ಳೆಯ ಕೆಲಸಗಳು ಅಮರವಾಗಿ ಉಳಿಯುತ್ತದೆ. ಸಮಸ್ಯೆಗಳು ಬಂತು ಅಂತ ಹೇಳಿ ಮನೆಯನ್ನು ಮಾರದೆ ಉಳಿಸಿಕೊಳ್ಳಲು ಪ್ರಯತ್ನಿಸಿ ಎಂದು ಕಿವಿಮಾತು ನೀಡಿ, ಸಂಘಟನೆಗಳ ಸ್ಥಾಪನೆ ಸುಲಭ. ಸಂಘಟನೆ ಆರಂಭಿಸಲು ಎಲ್ಲರೂ ಬೆಂಬಲ ನೀಡುತ್ತಾರೆ. ನಂತರದ ದಿನಗಳಲ್ಲಿ ಅದರ ಬೆಂಬಲಿಗರ ಸಂಖ್ಯೆ ಕಡಿಮೆಯಾಗುತ್ತದೆ. ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೆರ್ ಅಸೋಸಿಯೇಶನ್ ಪೆರಿಯಡ್ಕ ಸಂಘಟನೆಯನ್ನು ನಾನು ಹಲವಾರು ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಇಲ್ಲಿಯ ಸಮಸ್ಯೆಗಳು ಗ್ರಾಮ ಪಂಚಾಯತ್‌ನ ಕದತಟ್ಟುವುದಿಲ್ಲ. ಇಲ್ಲಿಯ ಜನರೇ ಅದನ್ನು ಪರಿಹರಿಸಿಕೊಳ್ಳುತ್ತಾರೆ. ನನ್ನನ್ನು ಮನುಷ್ಯನಾಗಿ ರೂಪಿಸಿದ ಊರು ಪೆರಿಯಡ್ಕ ಎಂದು ಭಾವುಕರಾಗಿ ನುಡಿದರು. ಈ ಪೆರಿಯಡ್ಕ ಊರು ಬೇರೆ ಊರುಗಳಿಗೆ ಆದರ್ಶವಾಗಲಿ ಎಂದರು.
ಎಂ.ಜೆ.ಎಂ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಾತನಾಡಿ, ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೆರ್ ಅಸೋಸಿಯೇಶನ್ ಮತ್ತು ಮನ್ಬಾಹು ರಹ್ಮ ಇವೆರಡು ಸಿಹಿನೀಡುವ ಜೇನುಗೂಡಿನಂತೆ. ಪೆರಿಯಡ್ಕಕ್ಕೆ ದಾರಿದೀಪದ ಒಳಚರಂಡಿ ವ್ಯವಸ್ಥೆಯ ಅವಶ್ಯಕತೆ ಇದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರ ಗಮನ ಸೆಳೆದರು.
ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೆರ್ ಅಸೋಸಿಯೇಶನ್‌ನ ಸ್ಥಾಪಕಾಧ್ಯಕ್ಷ ಇಸ್ಮಾಯಿಲ್ ಮುಸ್ಲಿಯಾರ್ ಮಾತನಾಡಿ, ಇಸ್ಲಾಮಿನಲ್ಲಿ ಸುದ್ದಿಗೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಪೇಟೆಯಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಂಡು ಪ್ರಚಾರ ಪಡೆಯುವುದಕ್ಕಿಂತ ಹಳ್ಳಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಕೈಹಾಕಿರುವುದು ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದಲ್ಲಿ ಬಡಕುಟುಂಬಗಳಿಗೆ ಶೌಚಾಲಯ ಮತ್ತು ಮನೆ ನಿರ್ಮಾಣಕ್ಕೆ ಸಹಾಯಧನದ ಚೆಕ್ ವಿತರಿಸಲಾಯಿತು.
ಮನ್‌ಬಾಹು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸಿದ್ದೀಕ್ ಹ್ಯಾಪಿಟೈಮ್ಸ್ ಸ್ವಾಗತಿಸಿದರು. ಮನ್‌ಬಾಹು ರಹ್ಮ ಚಾರಿಟೇಬಲ್ ಟ್ರಸ್ಟ್‌ನ ನಿರ್ದೇಶಕ ಅಬ್ದುಲ್ಲತೀಫ್ ಎಚ್.ಎಸ್.ಎ. ಧನ್ಯವಾದ ಸಮರ್ಪಿಸಿದರು. ಎಂ.ಜೆ.ಎಂ ಪೆರಿಯಡ್ಕ ಅಧ್ಯಕ್ಷ ಬಶೀರ್ ಕೆ.ಪಿ., ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಇಬ್ರಾಹೀಂ ಯು.ಕೆ., ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೆರ್ ಅಸೋಸಿಯೇಶನ್‌ನ ಅಧ್ಯಕ್ಷ ಮುಸ್ತಫಾ ಎಚ್.ಎಸ್.ಎ ಉಪಸ್ಥಿತರಿದ್ದರು.
ಮಸೀದಿ, ರಸ್ತೆ, ಬಸ್ಸುತಂಗುದಾಣ, ಸೊಸೈಟಿಯ ಮೂಲಕ ಸಾಗಿ ಭಜನಾ ಮಂದಿರದಲ್ಲೂ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.







