ಅತ್ತೂರು, ಯಡವನಾಡು ಕಂದಾಯ ಗ್ರಾಮಗಳಾಗಿ ಘೋಷಣೆ: ಪ್ರಮೋದ್ ಮಧ್ವರಾಜ್

ಮಡಿಕೇರಿ, ಮೇ 19: ಹಾರಂಗಿ ಜಲಾಶಯ ಮುಳುಗಡೆ ಪ್ರದೇಶದ ಅತ್ತೂರು ಹಾಗೂ ಯಡವನಾಡನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಒಪ್ಪಿಗೆ ನೀಡಿದ್ದು, ಈ ಸಂಬಂಧ ಸದ್ಯದಲ್ಲೇ ಅಧಿಕೃತ ಪ್ರಕಟನೆ ಹೊರಬೀಳಲಿದೆ ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಾರಂಗಿ ಜಲಾಶಯದಿಂದ ನಿರಾಶ್ರಿತರಾದ ಅತ್ತೂರು ಹಾಗೂ ಯಡವನಾಡನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಬೇಡಿಕೆ ಇದೆ. ಈ ಸಂಬಂಧ ಬೆಂಗಳೂರಿನಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆದಿದೆ. ಸದ್ಯದಲ್ಲೇ ಈ ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ 15 ದಿನಗಳಲ್ಲಿ ಪರಿಹಾರ ದೊರೆಯಲಿದ್ದು, ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದರು.
ಅತ್ತೂರು ಗ್ರಾಮದಲ್ಲಿ 772 ಎಕರೆ ಮತ್ತು ಯಡವನಾಡು ಗ್ರಾಮ ವ್ಯಾಪ್ತಿಯಲ್ಲಿ 1,068 ಎಕರೆ ಭೂಮಿ ಕಂದಾಯ ಗ್ರಾಮ ವ್ಯಾಪ್ತಿಗೆ ಬರಲಿದೆ. ಜಿಲ್ಲೆಯಲ್ಲಿ 1,39,860 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಲಾಗಿದ್ದು, ಇದನ್ನು ಜಂಟಿ ಸರ್ವೆ ಮಾಡಿದಾಗ 24,588 ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್‌ನಿಂದ ವಾಪಸು ಕಂದಾಯ ಇಲಾಖೆಗೆ ಪಡೆಯಲು ಸರಕಾರ ಶಿಫಾರಸು ಮಾಡಿದ್ದು, ಇದಕ್ಕೆ ಕೇಂದ್ರ ಒಪ್ಪಿಗೆ ನೀಡಬೇಕಿದೆ ಎಂದರು. ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಬಾಕಿ ಇರುವ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತಾಗಲು ಮೇಲ್ವಿಚಾರಣೆಗಾಗಿ ಉಪ ವಿಭಾಗಾಧಿಕಾರಿಯನ್ನು, ಹಾಗೆಯೇ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿನ ಕಡತಗಳ ತ್ವರಿತ ವಿಲೇವಾರಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರನ್ನು ನಿಯೋಜಿಸಲು ಜಿಲ್ಲಾಧಿಕಾರಿ ಅವರಿಗೆ ತಿಳಿಸಲಾಗಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು. ಶಿರಸ್ತೆದಾರರು, ತಹಶೀಲ್ದಾರರು, ಉಪ ವಿಭಾಗಾಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು ಹೀಗೆ ವಿವಿಧ ಹಂತದ ಅಧಿಕಾರಿಗಳು ತಮ್ಮ ಬಳಿ ಬಾಕಿ ಇರುವ ಕಡತಗಳನ್ನು ಕಾಲ ಮಿತಿಯೊಳಗೆ ವಿಲೇವಾರಿ ಮಾಡಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು. ಈ ಸಂಬಂಧ ತಾತ್ಕಾಲಿಕವಾಗಿ ವಿಶೇಷ ಜಿಲ್ಲಾಧಿಕಾರಿಯನ್ನು ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಮನವಿ ಮಾಡಿದ್ದಾರೆ. ಇದನ್ನು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಶೀಘ್ರ ವಿಲೇವಾರಿಗೆ ಸೂಚನೆ: ಎ
ಸಿ ಕಚೇರಿಯಲ್ಲಿ 94 ಕಡತಗಳು ಬಾಕಿ ಇದ್ದು, ಶೀಘ್ರ ವಿಲೇವಾರಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಶೇ.30ರಷ್ಟು ಆರ್‌ಟಿಸಿ ಗಳಿಗೆ ಬೆಳೆ ನಮೂದು ಮಾಡಲಾಗಿದೆ. ಇನ್ನು ಉಳಿದ 70ರಷ್ಟು ಆರ್‌ಟಿಸಿ ಗಳಿಗೆ ಮೂರು ತಿಂಗಳಲ್ಲಿ ಬೆಳೆ ನಮೂದು ಮಾಡಬೇಕಾಗಿದೆ. ಬೆಳೆ ನಮೂದನ್ನು ಆಂದೋಲನ ಮಾದರಿಯಲ್ಲಿ ಮಾಡಬೇಕು. ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಎರಡು ವರ್ಷಕ್ಕೂ ಮೇಲ್ಪಟ್ಟು 109 ಕಡತಗಳು ಬಾಕಿ ಇದ್ದು, ಆರು ತಿಂಗಳಲ್ಲಿ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ 779 ಕಂದಾಯ ಅದಾಲತ್‌ಗಳು ನಡೆದಿದ್ದು, ಸುಮಾರು 5,513 ಅರ್ಜಿಗಳು ಸ್ವೀಕೃತವಾಗಿದ್ದು, 4,976 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ತಿಳಿಸಿದರು.
ಆರ್‌ಟಿಸಿಗಳಿಗೆ ಕಂದಾಯ ಬಾಕಿ: ಸುಮಾರು 66 ಸಾವಿರ ಆರ್‌ಟಿಸಿಗಳಿಗೆ ಕಂದಾಯ ನಿಗದಿ ಪಡಿಸಲು ಬಾಕಿ ಇದೆ. ಇದನ್ನು ಕಂದಾಯ ನಿಗದಿ ಸಂಬಂಧ ಸ್ಥಳ ಪರಿಶೀಲನೆ ಮಾಡಿ ಕಂದಾಯ ನಿಗದಿಪಡಿಸಬೇಕೆ ಅಥವಾ ಕಚೇರಿಯಲ್ಲಿ ಕುಳಿತು ಕಂದಾಯ ನಿಗದಿಪಡಿಸಬೇಕೇ ಎಂಬ ಬಗ್ಗೆ ಜಿಜ್ಞಾಸೆಯಿದ್ದು, ಈ ಬಗ್ಗೆ ಕಂದಾಯ ಇಲಾಖೆಯ ಉನ್ನತ ಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.







