ಮಲೆನಾಡಿಗೂ ತಟ್ಟಿದ ದಕ್ಷಿಣ ಕನ್ನಡ ಬಂದ್ ಬಿಸಿ
ಸರಕಾರಿ ಬಸ್ ಇಲ್ಲದೇ ಪರದಾಡಿದ ಪ್ರಯಾಣಿಕರು

ಮೂಡಿಗೆರೆ, ಮೇ 19: ಎತ್ತಿನಹೊಳೆ ಯೋಜನೆ ವಿರೋಧಿಸಿ ವಿವಿಧ ಸಂಘಟನೆಗಳು ದಕ್ಷಿಣ ಕನ್ನಡ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕರಾವಳಿ ಕಡೆಗೆ ಸಾಗುವ ಸರಕಾರಿ ಬಸ್‌ಗಳು ಗುರುವಾರ ಮುಂಜಾನೆಯಿಂದಲ್ಲೇ ಸಂಚಾರ ಸ್ಥಗಿತಗೊಳಿಸಿದ್ದವು.
ಇದರಿಂದಾಗಿ ಮಂಗಳೂರು, ಧರ್ಮಸ್ಥಳ ಕಡೆಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವಂತಾಯಿತು. ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ಸಂಜೆಯವರೆಗೂ 20ಕ್ಕೂ ಹೆಚ್ಚು ಸರಕಾರಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ಸರಕಾರಿ ಬಸ್ ಇಲ್ಲದಿದ್ದರಿಂದ ಬಸ್ ನಿಲ್ದಾಣದಲ್ಲಿಯೇ ಪ್ರಯಾಣಿಕರು ಕಾಯುತ್ತಿದ್ದ ದೃಶ್ಯ ಗುರುವಾರ ಕಂಡುಬಂತು.
ಬಂದ್‌ನ ಲಾಭ ಪಡೆದ ಖಾಸಗಿ ವಾಹನಗಳ ಚಾಲಕರು ಉಜಿರೆವರೆಗೆ ಪ್ರಯಾಣಿಕರನ್ನು ಕರೆದೊಯ್ದರು. ಖಾಸಗಿ ವಾಹನಗಳು ದುಪ್ಪಟ್ಟು ಹಣ ಪಡೆಯುತ್ತಿದ್ದರೂ ಸರಕಾರಿ ಬಸ್ ಇಲ್ಲವಾದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದದ್ದು ಕಂಡುಬಂತು. ದೂರದ ಊರುಗಳಿಂದ ಕೊಟ್ಟಿಗೆಹಾರ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೊರಟಿದ್ದ ನೂರಾರು ಪ್ರಯಾಣಿಕರು ಸಂಜೆಯವರೆಗೂ ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಿ ಕಾಲ ಕಳೆಯುವಂತಾಯಿತು. ಸರಕಾರಿ ವಾಹನಗಳ ಸಂಚಾರ ಇಲ್ಲವಾದದ್ದರಿಂದ ಕೊಟ್ಟಿಗೆಹಾರದಲ್ಲಿ ಜನಸಂಚಾರವೂ ಕಡಿಮೆ ಇತ್ತು. ವ್ಯಾಪಾರಸ್ಥರಿಗೆ ಬಂದ್‌ನ ಬಿಸಿ ತಾಗಿದ್ದು, ವ್ಯಾಪಾರ ಕಡಿಮೆ ಇತ್ತು. ಸಂಜೆ 4 ಗಂಟೆಯ ನಂತರ ಸರಕಾರಿ ಬಸ್‌ಗಳು ಎಂದಿನಂತೇ ಪ್ರಯಾಣ ಮುಂದುವರಿಸಿದವು.







