ದೋಣಿ ನೋಂದಣಿ ಸಂಖ್ಯೆ ಆಧಾರ್ ಕಾರ್ಡ್‌ಗೆ ಜೋಡಣೆ

ಕಾರವಾರ, ಮೇ 19: ಮೀನುಗಾರರಿಗೆ ಸರಕಾರದಿಂದ ಬಿಡುಗಡೆಯಾಗುವ ಸವಲತ್ತುಗಳನ್ನು ಸಮರ್ಪಕವಾಗಿ ಪೂರೈಕೆ ಮಾಡುವ ಉದ್ದೇಶದಿಂದ ಮೀನುಗಾರಿಕಾ ಇಲಾಖೆಯು ಸ್ಮಾರ್ಟ್‌ಕಾರ್ಡ್ ಹಾಗೂ ದೋಣಿ ನೋಂದಣಿ ಸಂಖ್ಯೆಯನ್ನು ಆಧಾರ್‌ನೊಂದಿಗೆ ಜೋಡಿಸಲು ಮುಂದಾಗಿದ್ದು, ಇದರಿಂದ ದುರುಪಯೋಗವಾಗುತ್ತಿದ್ದ ಹಲವು ಯೋಜನೆಗಳಿಗೆ ತಡೆ ಬೀಳಲಿದೆ.
ಮತ್ಸ ಕ್ಷಾಮದಿಂದ ಕಂಗಾಲಾಗಿರುವ ಮೀನುಗಾರರ ಜೀವನೋಪಾಯಕ್ಕಾಗಿ ಹಾಗೂ ಮೀನು ಸಂತತಿಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಆದರೆ ಇದು ಸಮರ್ಪಕವಾಗಿ ಮೀನುಗಾರರನ್ನು ತಲುಪುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಯೋಜನೆಗಳ ಮಾಹಿತಿ ಹಾಗೂ ಸೌಲಭ್ಯಗಳು ನೇರವಾಗಿ ಮೀನುಗಾರರ ಕೈ ಸೇರಲು ಈ ಕ್ರಮ ಕೈಗೊಂಡಿದೆ. ಮೀನುಗಾರಿಕೆ ಉತ್ತೇಜನಕ್ಕಾಗಿ ಸರಕಾರ ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಯಾಂತ್ರೀಕೃತ ದೋಣಿಗಳಿಗೆ ಡೀಸೆಲ್ ಸಬ್ಸಿಡಿ, ಸಾಂಪ್ರದಾಯಿಕ ದೋಣಿಗೆ ಇಂಜಿನ್ ಅಳವಡಿಕೆಗೆ ಸಹಾಯಧನ, ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಜೀವನೋಪಾಯ ಪರಿಹಾರ, ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ವಿತರಣೆ ಹೀಗೆ ಹತ್ತಾರು ಸೌಲಭ್ಯಗಳು ಮೀನುಗಾರರಿಗೆ ಸಿಗುತ್ತಿವೆ. ಇವುಗಳಲ್ಲಿನ ದುರುಪಯೋಗ ಹಾಗೂ ಅಕ್ರಮ ತಡೆಗೆ ಆಧಾರ್ ಜೋಡಣೆ ನೆರವಾಗಲಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಲ್.ದೊಡ್ಮನಿ.
ದೇಶದ ಆಂತರಿಕ ಭದ್ರತೆಯ ದೃಷ್ಟಿಯಿಂದ ಮೀನುಗಾರಿಕೆ ದೋಣಿಗಳಿಗೆ ಕಲರ್ ಕೋಡಿಂಗ್ ಅಳವಡಿಸುವುದು ಹಾಗೂ ಮೀನುಗಾರರು ಬಯೋಮೆಟ್ರಿಕ್ ಕಾರ್ಡ್ ಹೊಂದಿರುವುದು ಕೇಂದ್ರ ಗೃಹ ಇಲಾಖೆಯು ಕಡ್ಡಾಯಗೊಳಿಸಿದೆ. ಮರದ ದೋಣಿಗಳ ತಳಭಾಗ (ಹಲ್) ಬಿಳಿ, ಸ್ಟೀಲ್ ದೋಣಿಯಾದರೆ ತಿಳಿಕೆಂಪು (ರೆಡ್ ಆಕ್ಸೈಡ್), ಫೆಂಡರ್ ಭಾಗ ಕಪ್ಪು ಹಾಗೂ ಕ್ಯಾಬಿನ್ ಭಾಗದ ಕೆಳ ಅರ್ಧ ನೀಲಿ ಮತ್ತು ಮೇಲಿನ ಅರ್ಧ ಬಿಳಿ ಬಣ್ಣದಿಂದ ಕೂಡಿರಬೇಕು. ಕಲರ್ ಕೋಡಿಂಗ್ ಅಳವಡಿಸಲು ಜುಲೈ 30ರವರೆಗೆ ಗಡುವು ನೀಡಲಾಗಿದೆ. ಈ ನಿಯಮ ಪಾಲಿಸದ ದೋಣಿಗಳಿಗೆ ಆಗಸ್ಟ್ ತಿಂಗಳಿಂದ ಡೀಸೆಲ್ ವಿತರಣೆಯನ್ನು ಸ್ಥಗಿತಗೊಳಿಸುವ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲದೆ, 20 ಮೀಟರ್‌ಗಿಂತ ಹೆಚ್ಚಿನ ಉದ್ದದ ಎಲ್ಲ ದೋಣಿಗಳು ಇನ್ನು ಮುಂದೆ ಕಡ್ಡಾಯವಾಗಿ ‘ಟ್ರಾನ್ಸ್ ಫಂಡರ್ಸ್’ ಸಲಕರಣೆ ಅಳವಡಿಸಬೇಕು. ಇದು ಟ್ರಾನ್ಸ್ಮಿಟ್ ರೀತಿ ಕಾರ್ಯನಿರ್ವಹಿಸಲಿದ್ದು, ಕಡಲಿನಲ್ಲಿ ಅಪಾಯಕ್ಕೆ ಸಿಲುಕುವ ದೋಣಿಗಳನ್ನು ಸುಲಭವಾಗಿ ತಿಳಿಯಬಹುದು ಎಂದು ಅವರು ಮಾಹಿತಿ ನೀಡಿದರು. ಮೀನುಗಾರರ ಸ್ಮಾರ್ಟ್ ಕಾರ್ಡ್ ಹಾಗೂ ದೋಣಿ ನೋಂದಣಿ ಸಂಖ್ಯೆಯನ್ನು ಆಧಾರ್‌ಗೆ ಜೋಡಿಸುವ ಪ್ರಕ್ರಿಯೆ ಶೀಘ್ರದಲ್ಲಿಯೇ ಆರಂಭಿಸಲಾಗುವುದು. ಮೀನುಗಾರರು ಬಯೋಮೆಟ್ರಿಕ್ ಕಾರ್ಡ್ ಅನ್ನು ಲ್ಯಾಮಿನೇಟ್ ಮಾಡುತ್ತಿರುವುದರಿಂದ ಅಥವಾ ನಕಲು ಪ್ರತಿಯನ್ನು ಕೊಂಡೊಯ್ಯುವುದರಿಂದ ಭದ್ರತಾ ಪಡೆಗಳಿಗೆ ತಪಾಸಣೆ ಸಮಯದಲ್ಲಿ ಕಾರ್ಡ್ ರೀಡರ್‌ಗಳಿಗೆ ಓದಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮೀನುಗಾರಿಕೆಗೆ ತೆರಳುವಾಗ ಎಲ್ಲ ಮೀನುಗಾರರು ಮೂಲ ಬಯೋಮೆಟ್ರಿಕ್ ಕಾರ್ಡ್ ಕೊಂಡೊಯ್ಯಬೇಕು. -ಎಂ.ಎಲ್. ದೊಡ್ಮನಿ, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ.







