ಡಿಸಿಗೆ ಘೇರಾವ್ ಹಾಕಲು ಯತ್ನ: 30ಕ್ಕೂ ಅಧಿಕ ಜನರ ಬಂಧನ
ಕೆರೆ ಒತ್ತುವರಿ ತೆರವುಗೊಳಿಸುವಲ್ಲಿ ನಿರ್ಲಕ್ಷ ಆರೋಪ
ಶಿವಮೊಗ್ಗ, ಮೇ 19: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಕೆರೆಗಳ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಆಗ್ರಹಿಸಿ, ಅಣ್ಣಾ ಹಝಾರೆ ಹೋರಾಟ ಸಮಿತಿಯು ಕಳೆದ ನಾಲ್ಕು ದಿನಗಳಿಂದ ನಗರದ ಡಿಸಿ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಧರಣಿಯು ಗುರುವಾರ ವಿಕೋಪಕ್ಕೆ ತಿರುಗಿತು. ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿಯವರಿಗೆ ಧರಣಿಕಾರರು ಘೇರಾವ್ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಧರಣಿಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು. ಆರೋಪವೇನು?: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಕೆರೆಗಳ ಒತ್ತುವರಿ ಮಾಡಲಾಗಿದೆ. ಇಂದಿಗೂ ಕೂಡ ಒತ್ತುವರಿ ಪ್ರಕ್ರಿಯೆ ಮುಂದುವರಿದಿದೆ. ಕೆರೆಗಳ ಸಂರಕ್ಷಣೆಗಾಗಿಯೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಮಿತಿಯು ಹಲವು ನಿರ್ಣಯ ಕೂಡ ಅಂಗೀಕರಿಸಿದೆ. ಆದರೆ ಜಿಲ್ಲಾಧಿಕಾರಿಗಳ ನೇತೃತ್ವದ ಕೆರೆ ಸಂರಕ್ಷಣಾ ಸಮಿತಿಯು ಕೆರೆ ಒತ್ತುವರಿ ತೆರವಿಗಾಗಲಿ, ಸಂರಕ್ಷಣೆಗಾಗಲಿ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ ಧೋರಣೆ ಅನುಸರಿಸಿಕೊಂಡು ಬರುತ್ತಿದೆ. ಜಿಲ್ಲಾಧಿಕಾರಿಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿ
್ದಾರೆ ಎಂದು ಧರಣಿಕಾರರು ದೂರಿದ್ದಾರೆ. ಕಳೆದ 5 ವರ್ಷಗಳಿಂದ ಕೆರೆ ಸಂರಕ್ಷಣೆ, ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಸಮಿತಿಯಲ್ಲಿರುವ ಅಧಿಕಾರಿಗಳು ಬರೀ ಸಭೆ ನಡೆಸಿ, ನಿರ್ಣಯ ಅಂಗೀಕರಿಸುತ್ತಿದ್ದಾರೆ. ಸಮಯ, ಹಣ ವ್ಯರ್ಥ ಮಾಡುತ್ತಿದ್ದಾರೆ. ಕೆರೆ ಸಂರಕ್ಷಣೆಯ ಬಗ್ಗೆ ಯಾವುದೇ ಬದ್ದತೆ ಜಿಲ್ಲಾಡಳಿತಕ್ಕಿಲ್ಲವಾಗಿದೆ ಎಂದು ಧರಣಿಕಾರರು ಟೀಕಿಸಿದ್ದಾರೆ.
ಧರಣಿ:
ಕೆರೆ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಮೇ 16 ರಿಂದ ಡಿಸಿ ಕಚೇರಿ ಆವರಣದಲ್ಲಿ ನಿರ್ದಿಷ್ಟ ಸಮಯದವರೆಗೆ ಸಂಘಟನೆಯ ಮುಖಂಡರು ಧರಣಿ ನಡೆಸುತ್ತಿದ್ದಾರೆ. ಸೂಕ್ತ ಕ್ರಮಕೈಗೊಳ್ಳುವವರೆಗೂ ನಿಲ್ಲಿಸುವುದಿಲ್ಲ ಎಂದು ಸಂಘಟನೆಯ ಮುಖಂಡರು ಸ್ಪಷ್ಟಪಡಿಸಿದ್ದರು. ಧರಣಿ ಹೊರತಾಗಿಯೂ ಜಿಲ್ಲಾಡಳಿತ ಕೆರೆ ಸಂರಕ್ಷಣೆಯ ಬಗ್ಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಧರಣಿಕಾರರಿಗೆ ಸ್ಪಷ್ಟ ಭರವಸೆ ನೀಡಿರಲಿಲ್ಲ. ಈ ನಡುವೆ ಗುರುವಾರ ಅಣ್ಣಾ ಹಝಾರೆ ಹೋರಾಟ ಸಮಿತಿಯ ಹೋರಾಟಕ್ಕೆ ರೈತ ಸಂಘಟನೆ ಕೂಡ ಬೆಂಬಲ ವ್ಯಕ್ತಪಡಿಸಿತ್ತು. ಮುಖಂಡರು ಧರಣಿಯಲ್ಲಿ ಭಾಗಿಯಾಗಿದ್ದರು. ಕಚೇರಿಯಲ್ಲಿದ್ದರೂ ಜಿಲ್ಲಾಧಿಕಾರಿಗಳು ಧರಣಿನಿರತರ ಅಹವಾಲು ಆಲಿಸಲು ಬರಲಿಲ್ಲಿ. ಇದರಿಂದ ಆಕ್ರೋಶಗೊಂಡ ಧರಣಿನಿರತರು ಡಿಸಿ ಕಚೇರಿ ಒಳಗೆ ಪ್ರವೇಶಿಸಿದರು. ಕಚೇರಿ ಸಭಾಂಗಣದಲ್ಲಿ ಸಭೆ ನಡೆಸುತ್ತಿದ್ದ ಡಿಸಿಯವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಸಭಾಂಗಣದ ಬಾಗಿಲು ಬಂದ್ ಮಾಡಿದ್ದರಿಂದ ಒಳ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಧರಣಿನಿರತರು ಡಿಸಿ ಯವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಾತಿನ ಚಕಮಕಿ:
ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಧರಣಿನಿರತರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಪೊಲೀಸರು ಎಲ್ಲರನ್ನು ಬಂಧಿಸಿ ಕರೆದೊಯ್ದು, ತದನಂತರ ಬಿಡುಗಡೆಗೊಳಿಸಿದರು. ಕೆರೆಗಳ್ಳರ ಪರವಾಗಿ ನಿಂತಿದ್ದಾರೆಯೇ ಜಿಲ್ಲಾಧಿಕಾರಿ?
ಕೆರೆ ಸಂರಕ್ಷಣೆಗೆ ಆಗ್ರಹಿಸಿ ಡಿಸಿ ಕಚೇರಿ ಆವರಣದಲ್ಲಿ ವಿವಿಧ ಸಂಘಟನೆಗಳು ಧರಣಿ ನಡೆಸುತ್ತಿದ್ದರೂ ಅಹವಾಲು ಆಲಿಸುವ ಕನಿಷ್ಠ ಸೌಜನ್ಯವನ್ನು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿಯವರು ತೋರಲಿಲ್ಲ. ಇವರ ಈ ವರ್ತನೆ ಗಮನಿಸಿದರೆ ಕೆರೆಗಳ್ಳರು, ಭೂಗಳ್ಳರ ಪರವಾಗಿ ಅವರು ನಿಂತುಕೊಂಡಿರುವಂತಿದೆ.
-ಎಚ್.ಆರ್.ಬಸವರಾಜಪ್ಪ, ಕರ್ನಾಟಕ ರಾಜ್ಯ ರೈತ ಸಂದ ಕಾರ್ಯಾಧ್ಯಕ್ಷ
ಕೆರೆ ಉಳಿಸಿ ಎಂದರೆ, ಅರೆಸ್ಟ್ ಮಾಡಿಸುವ ಡಿಸಿ
ಕೆರೆ ಉಳಿಸಲು ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿ ಧರಣಿ ನಡೆಸಿದರೆ, ಪೊಲೀಸರ ಮೂಲಕ ಹೋರಾಟಗಾರರನ್ನು ಬಂಧಿಸುತ್ತಾರೆ. ಇಂತಹ ಜಿಲ್ಲಾಧಿಕಾರಿಯ ಸೇವೆ ಜಿಲ್ಲೆಗೆ ಅಗತ್ಯವಿಲ್ಲ. ಇವರನ್ನು ತತ್‌ಕ್ಷಣದಿಂದಲೇ ಜಿಲ್ಲೆಯಿಂದ ವರ್ಗಾವಣೆ ಮಾಡಲು ಸರಕಾರ ಕ್ರಮಕೈಗೊಳ್ಳಬೇಕು.
-ಅಶೋಕ್ ಯಾದವ್, ಅಣ್ಣಾ ಹಝಾರೆ ಹೋರಾಟ ಸಮಿತಿಯ ಪ್ರ.ಕಾರ್ಯದರ್ಶಿ.
ಸುಸ್ತಾದ ಪೊಲೀಸರು
ಒಂದೆಡೆ ಧರಣಿ ನಿರತರು ಡಿಸಿ ಕಚೇರಿಗೆ ಆಗಮಿಸಿ ಅಹವಾಲು ಆಲಿಸುವವರೆಗೂ ಕಚೇರಿಯಿಂದ ಹೊರಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಮತ್ತೊಂದೆಡೆ ಜಿಲ್ಲಾಧಿಕಾರಿಗಳು ಧರಣಿ ನಿರತರ ಅಹವಾಲು ಆಲಿಸಲು ಸಿದ್ಧ್ದರಿರಲಿಲ್ಲ. ಇದರಿಂದ ಡಿಸಿ ಹಾಗೂ ಧರಣಿ ನಿರತರ ನಡುವೆ ಸಂಧಾನಕಾರರಾಗಿ ಕೆಲಸ ಮಾಡುತ್ತಿದ್ದ ಪೊಲೀಸ್ ಅಧಿಕಾರಿಗಳು ಅಕ್ಷರಶಃ ಹೈರಾಣಾಗುವಂತಾಯಿತು. ಡಿವೈಎಸ್ಪಿ ಡಾ. ರಾಮ್ ಎಲ್. ಅರೆಸಿದ್ದಿಯವರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಧರಣಿ ನಿರತರು ಮುಂದಿಟ್ಟಿರುವ ಬೇಡಿಕೆ ವಿವರಿಸಿದರು. ಆದರೆ ಸಭೆ ನಡೆಸುತ್ತಿದ್ದ ಡಿಸಿಯವರು ಅಹವಾಲು ಆಲಿಸಲು ಬರಲಿಲ್ಲ. ಸುಮಾರು ಒಂದು ಗಂಟೆಯ ಕಾಲ ಧರಣಿನಿರತರು ಕಚೇರಿಯ ಒಳಗಡೆಯೇ ಕುಳಿತಿದ್ದರು. ಅಂತಿಮವಾಗಿ ಪೊಲೀಸರು ಧರಣಿನಿರತರನ್ನು ಬಂಧಿಸಿ ಕರೆದೊಯ್ಯುವಂತಾಯಿತು.







