ಕಂದಾಯ ಇಲಾಖೆ ಕಡತ ವಿಲೇವಾರಿಗೆ ಸೂಚನೆ

ಮಡಿಕೇರಿ,ಮೇ19: ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ಅವರು ಗುರುವಾರ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ವಿವಿಧ ಹಂತಗಳಲ್ಲಿ ಬಾಕಿ ಇರುವ ಕಡತಗಳ ಸಂಬಂಧ ಶಿರಸ್ತೇದಾರರು, ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು, ಭೂ ದಾಖಲೆಗಳ ಉಪ ನಿರ್ದೇಶಕರು ಮತ್ತಿತರರಿಂದ ಮಾಹಿತಿ ಪಡೆದರು.
ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್.ಟಿ.ಸಿ ಪೋಡಿ ಇಂಡೀಕರಣ, ಪೋಡಿ ಮುಕ್ತ ಗ್ರಾಮ, ಭೂಮಿ ಸಾಫ್ಟ್‌ವೇರ್ ನ್ಯೂಟೇಷನ್ ಕಡತ ವಿಲೇವಾರಿ, ಓಲ್ಡ್ ಜೆ ಸ್ಲಿಪ್ 79(ಎ)(ಬಿ) ಆರ್‌ಟಿಸಿಕಲಂ 3 ಮತ್ತು 9, ಆರ್‌ಟಿಸಿಯಲ್ಲಿ ಬೆಳೆ ನಮೂದು ಮಾಡುವುದು, ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮೇಲ್ಮನವಿ ಪ್ರಕರಣಗಳ ಬಾಕಿ, ಕಂದಾಯ ಅದಾಲತ್, ಪಿಂಚಣಿ ಅದಾಲತ್, ಕಚೇರಿಯಲ್ಲಿ ತಹಶೀಲ್ದಾರರು ಮೇಜು ತಪಾಸಣೆ ಮಾಡುವುದು, ಅಕ್ರಮ ಸಕ್ರಮ ಸಭೆ ಮತ್ತಿತರ ಸಂಬಂಧ ಹಲವು ಮಾಹಿತಿ ಪಡೆದರು.
ಕಾಲ ಮಿತಿಯೊಳಗೆ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವಂತೆ ಅ ಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಸರ್ವೇ ವಿಭಾಗದಲ್ಲಿ ಸುಮಾರು 858 ಕಡತಗಳು ಬಾಕಿ ಇದ್ದು, ತ್ವರಿತವಾಗಿ ವಿಲೇವಾರಿ ಮಾಡಬೇಕು. ಆರ್.ಆರ್. ಕಡತಗಳಲ್ಲಿ 234 ಕಡತಗಳು ಬಾಕಿ ಇವೆೆ. 80 ಕ್ಕೂ ಹೆಚ್ಚು ಕಡತಗಳು ಎರಡು ವರ್ಷಕ್ಕೂ ಮೇಲ್ಪಟ್ಟು ವಿಲೇವಾರಿಗೆ ಬಾಕಿ ಇವೆ. ಇದನ್ನು ವಿಲೇವಾರಿ ಮಾಡಬೇಕು. ಎರಡು ವರ್ಷಕ್ಕೂ ಮೇಲ್ಪಟ್ಟು ಬಾಕಿ ಇರುವ ಕಡತಗಳನ್ನು ಮೂರು ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಮೂರು ವರ್ಷಕ್ಕೂ ಮೇಲ್ಪಟ್ಟು ಬಾಕಿ ಇರುವ ಕಡತಗಳನ್ನು ಆರು ತಿಂಗಳಲ್ಲಿ ವಿಲೇವಾರಿ ಮಾಡುವಂತೆ ಪ್ರಮೋದ್ ಮಧ್ವರಾಜ್ ಅವರು ನಿರ್ದೇಶನ ನೀಡಿದರು. ಕಂದಾಯ ಇಲಾಖೆ ಅಧಿಕಾರಿಗಳು ಜನಪರವಾಗಿ ಕಾರ್ಯನಿರ್ವಹಿಸಬೇಕು. ಆರ್‌ಟಿಸಿ ನೀಡಲು ಏನು ತೊಂದರೆ, ಆರ್‌ಟಿಸಿ ನೀಡಲು ಒಂದು ವರ್ಷ ಬೇಕೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 3,005 ಅರ್ಜಿಗಳು ಕಂದಾಯ ಇಲಾಖೆಯಲ್ಲಿ ವಿಲೇವಾರಿಗೆ ಬಾಕಿ ಇವೆೆ. ಅಧಿಕಾರಿಗಳು ಕಾರ್ಯವನ್ನು ಸವಾಲಾಗಿ ತೆಗೆದುಕೊಳ್ಳಬೇಕು ಎಂದರು.ಸಕಾಲದಲ್ಲಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಯಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ ಕೊಡಗನ್ನು ಸಹ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಭೂ ದಾಖಲೆಗಳ ಉಪ ನಿರ್ದೇಶಕರಾದ ಕೃಷ್ಣ ಪ್ರಸಾದ್, ತಹಶೀಲ್ದಾರರಾದ ಕುಂಞಮ್ಮ, ಶಿವಪ್ಪ, ಮಹದೇವಸ್ವಾಮಿ, ಶಿರಸ್ತೆದಾರರು ಮತ್ತಿತರರು ಸಭೆಯಲ್ಲಿ ಹಲವು ಮಾಹಿತಿಗಳನ್ನು ನೀಡಿದರು.







