ಕೇವಲ 80 ರೂ.ಗಾಗಿ ಕೂಲಿಕಾರ್ಮಿಕನ ಹತ್ಯೆ
ನಿಗೂಢ ಕೊಲೆ ಪ್ರಕರಣ ಭೇದಿಸಿದ ಶಿವಮೊಗ್ಗ ಪೊಲೀಸರು

ಶಿವಮೊಗ್ಗ, ಮೇ 19: ನಗರದ ಆಲ್ಕೋಳ ಬಡಾವಣೆಯಲ್ಲಿ ಇತ್ತೀಚೆಗೆ ನಡೆದ ಕೂಲಿಕಾರ್ಮಿಕನ ಬರ್ಬರ ಹತ್ಯೆ ಪ್ರಕರಣ ಭೆೇದಿಸುವಲ್ಲಿ ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂಗಿಯ ಜೇಬಿನಲ್ಲಿದ್ದ ಕೇವಲ 80 ರೂ. ಹಣಕ್ಕಾಗಿ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆಪಾದಿತರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಾಶೀಪುರ ಬಡಾವಣೆಯ ನಿವಾಸಿಯಾದ ಮಧು ಯಾನೆ ದುಬೈ ಮಧು (30), ಈತನ ಸಂಬಂಧಿ ಸಂತೆಬೆನ್ನೂರು ಸಮೀಪದ ಗೆದ್ಲಹಟ್ಟಿ ಗ್ರಾಮದ ನಿವಾಸಿ ವಿಶ್ವನಾಥ್ (21) ಹಾಗೂ ರೌಡಿ ಶೀಟರ್ ಅರ್ಜುನ ಯಾನೆ ಹಂಡೆ ಅರ್ಜುನ (26) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇದರಲ್ಲಿ ದುಬೈ ಮಧು ಹಾಗೂ ವಿಶ್ವನಾಥ್ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದರೇ, ಹಂಡೆ ಅರ್ಜುನ ಸಾಕ್ಷ್ಯಾಧಾರ ನಾಶಪಡಿಸಲು ಆರೋಪಿಗಳಿಗೆ ನೆರವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಸುಳಿವು ಸಿಗದೆ, ನಿಗೂಢವಾಗಿದ್ದ ಈ ಹತ್ಯೆ ಪ್ರಕರಣ ಭೇದಿಸುವಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಮುಹಮ್ಮದ್ ಸುಜಿತ, ಡಿವೈಎಸ್ಪಿ ಡಾ. ರಾವ್‌ಎಲ್. ಅರೆಸಿದ್ದಿ, ದೊಡ್ಡಪೇಟೆ ವೃತ್ತದ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್, ವಿನೋಬನಗರ ಸಬ್ ಇನ್‌ಸ್ಪೆಕ್ಟರ್ ಅಭಯ ಪ್ರಕಾಶ್ ಸೋಮನಾಳ್ ನೇತೃತ್ವದ ತಂಡ ಯಶಸ್ವಿಯಾಗಿದೆ. ಘಟನೆ ಹಿನ್ನೆಲೆ: ಕಳೆದ ಸೋಮವಾರ ಬೆಳಗ್ಗೆ ಆಲ್ಕೋಳ ಬಡಾವಣೆಯ ವಿಕಾಸ ಶಾಲೆಯ ಬಳಿ ಅಪರಿಚಿತ ವ್ಯಕ್ತಿಯೋರ್ವನ ಕೊಲೆಗೀಡಾದ ಶವ ಪತ್ತೆಯಾಗಿತ್ತು. ಮುಖವನ್ನು ಕಲ್ಲಿನಿಂದ ಜಜ್ಜಿ ತಿಪ್ಪೆಗುಂಡಿಯಲ್ಲಿ ಶವ ಹೂತು ಹಾಕಲಾಗಿತ್ತು. ಮೃತ ವ್ಯಕ್ತಿ ತೊಟ್ಟಿದ್ದ ಶರ್ಟ್ ಕಾಲರ್‌ನಲ್ಲಿದ್ದ ಟೈಲರ್ ಅಂಗಡಿಯ ಸ್ಟಿಕ್ಕರ್ ಆಧಾರದ ಮೇಲೆ ಪೊಲೀಸರು ಮೃತ ವ್ಯಕ್ತಿಯ ಪೂರ್ವಾಪರ ಪತ್ತೆ ಹಚ್ಚಿದ್ದು, ಪುರಲೆ ಗುರುಪುರದ ನಿವಾಸಿ ಗಾರೆ ಕೆಲಸ ಮಾಡುವ ರವಿ (36) ಎಂಬುದು ತಿಳಿದು ಬಂದಿತ್ತು.
ಆದರೆ, ಈತನ ಹತ್ಯೆ ಮಾಡಿದವರ್ಯಾರು ಎಂಬ ಸಣ್ಣ ಸುಳಿವು ಕೂಡ ಪೊಲೀಸರಿಗೆ ಲಭ್ಯವಾಗಿರಲಿಲ್ಲ. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್‌ರವರು ಪ್ರಕರಣ ಬಯಲಿಗೆಳೆಯುವಲ್ಲಿ ಸಫಲರಾಗಿದ್ದು, ಇದು ಹಣಕ್ಕಾಗಿ ನಡೆದಿರುವ ಕೊಲೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಾಮಾಣಿಕ ತನಿಖೆ
ನಿಗೂಢವಾಗಿದ್ದ ಈ ಪ್ರಕರಣ ಬಯಲಿಗೆಳೆಯುವಲ್ಲಿ ತನಿಖಾ ಸ್ಪೆಷಲಿಸ್ಟ್ ಪೊಲೀಸ್ ಅಧಿಕಾರಿಗಳೆಂದೇ ಖ್ಯಾತರಾಗಿರುವ ಡಿವೈಎಸ್ಪಿ ಡಾ. ರಾವ್ ಎಲ್. ಅರೆಸಿದ್ದಿ, ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್‌ರವರು ಮಹತ್ವದ ಪಾತ್ರವಹಿಸಿದ್ದಾರೆ. ಹತ್ಯೆ ನಡೆಸಿದವರ್ಯಾರು ಎಂಬ ಯಾವುದೇ ಸಣ್ಣ ಸುಳಿವು ಸಿಗದೆ, ಮೀಡಿಯಾಗಳ ಗಮನ ಸೆಳೆಯದ, ಹೈಪ್ರೊಫೈಲ್ ಪ್ರಕರಣವಲ್ಲದ, ಸಾಮಾನ್ಯ ಕೂಲಿಕಾರ್ಮಿಕನ ಹತ್ಯೆ ಪ್ರಕರಣವನ್ನು ತಮ್ಮ ಪ್ರಾಮಾಣಿಕ ತನಿಖೆ ನಡೆಸುವ ಮೂಲಕ ನ್ಯಾಯ ಒದಗಿಸಿದ್ದಾರೆ.







