ಜೂ. 1ರಿಂದ ಪ್ಲಾಸ್ಟಿಕ್ ನಿಷೇಧ: ನಿಯಮ ಉಲ್ಲಂಘಿಸಿದರೆ ಕ್ರಮ
ಮೂಡಿಗೆರೆ, ಮೇ 19: ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಪ್ಲಾಸ್ಟಿಕ್‌ಗಳು ಜಾನುವಾರುಗಳ ಹೊಟ್ಟೆ ಸೇರಿ ಪ್ರಾಣಕ್ಕೆ ಕಂಟಕವಾಗುತ್ತಿವೆ. ಅಲ್ಲದೆ ಪ್ಲಾಸ್ಟಿಕ್‌ನಲ್ಲಿ ಬಿಸಿ ಪದಾರ್ಥಗಳನ್ನು ಹಾಕಿ ಸೇವಿಸುತ್ತಿರುವುದರಿಂದ ವಿವಿಧ ರೋಗಗಳಿಗೆ ತುತ್ತಾಗುವ ಸಂದರ್ಭವಿದೆ. ರಾಜ್ಯ ಸರಕಾರ ಮತ್ತು ಜಿಲ್ಲಾಧಿಕಾರಿ ಆದೇಶದಂತೆ ಜೂ. 1ರಿಂದ ಪಟ್ಟಣದಲ್ಲಿ ಪ್ಲಾಸ್ಟಿಕ ನಿಷೇಧ ಮಾಡುತ್ತಿದ್ದು, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್ ತಿಳಿಸಿದ್ದಾರೆ.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಪರಿಸರ ಸಂರಕ್ಷಣೆ ಕಾಯ್ದೆ 1986ರ ಸೆಕ್ಸನ್ 5 ರಂತೆ ಪಟ್ಟಣದಾದ್ಯಂತ ಜೂ. 1ರಿಂದ ಪ್ಲಾಸ್ಟಿಕ ಕ್ಯಾರಿಬ್ಯಾಗ್, ಪ್ಲಾಸ್ಟೀಕ್‌ತೋರಣ, ಪ್ಲಕ್ಸ್, ಬಾವುಟ, ಪ್ಲಾಸ್ಟಿಕ ತಟ್ಟೆ, ಲೋಟ ಮತ್ತು ಚಮಚಗಳು, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ ಹಾಳೆಗಳು ಹಾಗೂ ಥರ್ಮೋಕೂಲ್, ಬೀಡ್ಸ್‌ನಿಂದ ವಸ್ತುಗಳ ತಯಾರಿಕೆ, ಸರಬ ರಾಜು ಮತ್ತು ಬಳಕೆಯನ್ನು ನಿಷೇಧಿಸಿ ರಾಜ್ಯ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ನಿಷೇಧ ಕುರಿತು ಪಪಂ ಅಧ್ಯಕ್ಷೆ ಪಾರ್ವತಮ್ಮ ಅಧ್ಯಕ್ಷತೆಯಲ್ಲಿ ವರ್ತಕರ ಸಭೆಯನ್ನು ಶೀಘ್ರದಲ್ಲಿ ಕರೆಯಲಾಗುವುದು. ಸಾರ್ವಜನಿಕರು ಮತ್ತು ವರ್ತಕರು ಯಾವುದೇ ಪ್ಲಾಸ್ಟಿಕ್ ಹಾಗೂ ಮೇಲ್ಕಾಣಿಸಿದ ವಸ್ತುಗಳನ್ನು ಬಳಸದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪಪಂ ಆರೋಗ್ಯಾಧಿಕಾರಿ ಪ್ರಕಾಶ್, ಕಿರಿಯ ಅಭಿಯಂತರ ಜೈಸಿಂಗ್ ನಾಯ್ಕಾ ಉಪಸ್ಥಿತರಿದ್ದರು.







