ಶ್ರಮವಹಿಸಿ ಕೆಲಸ ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು: ಅಪ್ಸರ್ ಅಹ್ಮದ್
ಗಣಿತದಲ್ಲಿ ನೂರು ಅಂಕ ಪಡೆದ ಹಾಜಿರಾಗೆ ಪೇಟಾ ತೊಡಿಸಿ ಅಭಿನಂದನೆ

ಚಿಕ್ಕಮಗಳೂರು, ಮೇ 19: ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಕರು ಒಂದು ತಂಡವಾಗಿ ಶ್ರಮವಹಿಸಿ ಕೆಲಸ ಮಾಡಿದರೆ ಯಶಸ್ಸಿನ ಹಾದಿಗೆ ಸಹಕಾರಿಯಾಗುತ್ತದೆ ಎಂಬುದಕ್ಕೆ ಈ ಸಾಲಿನ ಎಸೆಸೆಲ್ಸಿ ಫಲಿತಾಂಶ ಸಾಕ್ಷಿಯಾಗಿದೆ ಎಂದು ವಿಬಿಇಎಸ್ ಪ್ರಾಂಶುಪಾಲ ಅಪ್ಸರ್ ಅಹ್ಮದ್ ತಿಳಿಸಿದ್ದಾರೆ.
ಅವರು ನಗರದ ಗೌರಿಕಾಲುವೆ ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೊದಲ ಪ್ರಯತ್ನದಲ್ಲೆ ಶಾಲೆಗೆ ನೂರರಷ್ಟು ಫಲಿತಾಂಶ ತಂದುಕೊಟ್ಟ 19ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ಎಸೆಸೆಲ್ಸಿಯನ್ನು ಶಾಲೆಯಲ್ಲಿ ಮೊದಲ ವರ್ಷ ಆರಂಭಿಸಿದ್ದೆವು ಆರಂಭದಲ್ಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸೇರಿಸಿ ಕಾರ್ಯಾಗಾರ ನಡೆಸಿ, ಕಲಿಕೆಯಲ್ಲಿ ಯಾವರೀತಿ ಶ್ರಮ ವಹಿಸಬೇಕೆಂದು ಅನುಭವಿಗಳಿಂದ ತರಬೇತಿ ನೀಡಲಾಗಿತ್ತು. ಅದರ ಪ್ರತಿಫಲವಾಗಿ ಮೊದಲ ವರ್ಷದ ಪ್ರಯತ್ನದಲ್ಲೆ ಶೇ. 100ರಷ್ಟು ಫಲಿತಾಂಶ ಲಭಿಸಿರುವುದು ಭವಿಷ್ಯದ ಶಿಕ್ಷಣಕ್ಕೆ ದಾರಿದೀಪವಾಗಿದೆ ಎಂದರು.
ವಿದ್ಯಾರ್ಥಿನಿ ಹಾಜಿರಾ ಬಾನು ಗಣಿತದಲ್ಲಿ ನೂರಕ್ಕೆ ನೂರು ಅಂಕ ಗಳಿಸಿ ಶಾಲೆಯ ಕೀರ್ತಿಯನ್ನು ಬೆಳಗಿಸಿರುವುದಲ್ಲದೆ ಪೋಷಕರಿಗೂ ಹೆಮ್ಮೆ ತಂದಿದ್ದಾಳೆ. ಮಕ್ಕಳು ದೇಶಕ್ಕೆ ಆಸ್ತಿಯಾಗಬೇಕೆಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ, ವಿದ್ಯಾ ಸಂಸ್ಥೆಗಳನ್ನು ದುಡಿಮೆಯ ಕೇಂದ್ರಗಳನ್ನಾಗಿ ಮಾಡಿಕೊಳ್ಳದೆ ಶಿಕ್ಷಣದ ಮೂಲಕ ಭವಿಷ್ಯದ ಉತ್ತಮ ಪ್ರಜೆಯನ್ನು ರೂಪಿಸುವ ಸಂಸ್ಥೆಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಶಿಕ್ಷಕಿಯರು ಗಣಿತದಲ್ಲಿ ನೂರು ಅಂಕಪಡೆದ ವಿದ್ಯಾರ್ಥಿನಿಗೆ ಪುಷ್ಪಮಾಲೆ ಮತ್ತು ಪೇಟತೊಡಿಸಿ ಅಭಿನಂದಿಸಿದರು. ಇನ್ನುಳಿದ ವಿದ್ಯಾರ್ಥಿನಿಯರಿಗೆ ತ್ರಿವರ್ಣ ಬಣ್ಣದ ಬಳೆಗಳನ್ನು ತೊಡಿಸಿ ವಿಶೇಷವಾಗಿ ಅಭಿನಂದಿಸಿದರು.
ಶಿಕ್ಷಕರಾದ ಸಾಹಿರಾಬಾನು, ಮುಬಿನ್‌ತಾಜ್, ಬಾನುಪ್ರಕಾಶ್, ಮಂಜುನಾಥ್, ತಬರೀಸ್ ಮತ್ತಿತರರು ಉಪಸ್ಥಿತರಿದ್ದರು.







