ಪ್ರಾಣಿಗಳಿಗಿರುವ ಭಾವನೆ ಮನುಷ್ಯರಿಗಿಲ್ಲ: ಶ್ರೀ ಈಶ್ವರಾನಂದ ಸ್ವಾಮೀಜಿ
ತರೀಕೆರೆ, ಮೇ 19: ಪ್ರಾಣಿಗಳಿಗಿರುವ ಭಾವನೆ ಮನುಷ್ಯರಿಗಿಲ್ಲ. ವಿವೇಕವಿಲ್ಲದ ವ್ಯಕ್ತಿ ಪ್ರಾಣಿಗಿಂತಲೂ ಕೀಳು, ಇತ್ತೀಚಿನ ದಿನಗಳಲ್ಲಿ ಮನುಷ್ಯ ಸಾಮಾನ್ಯ ಜ್ಞಾನವನ್ನು ಕಳೆದುಕೊಳ್ಳುತ್ತಿದ್ದಾನೆ. ದನಿ ಇಲ್ಲದ ಸಮಾಜಕ್ಕೆ ದನಿಯಾಗುವುದು ನಿಮ್ಮ ಕರ್ತವ್ಯ ಎಂದು ಹೊಸದುರ್ಗ ಕಾಗಿನೆಲೆ ಪೀಠದ ಶ್ರೀ ಈಶ್ವರಾನಂದ ಸ್ವಾಮೀಜಿ ನುಡಿದರು.
ತರೀಕೆರೆ ಶ್ರೀ ಗುರು ರೇವಣಸಿದ್ದೇಶ್ವರ ಸಾರ್ವಜನಿಕ ಸಮುದಾಯ ಭವನದ ಶಂಕುಸ್ಥಾಪನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ದೊಡ್ಡ ಸಮಾಜವಾಗಿ ಗುರುತಿಸಿಕೊಂಡಿರುವ ಕುರುಬ ಸಮಾಜ ಹಿಂದುಳಿದ, ಶೋಷಿತ ಸಮಾಜಗಳಿಗೆ ಆಶ್ರಿತರಾಗಬೇಕಿದೆ. ದೇವರಾಜ ಅರಸುರವರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮುದಾಯ ಭವನಗಳ ನಿರ್ಮಾಣ ಅರ್ಥಪೂರ್ಣವಾಗುತ್ತದೆ ಎಂದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಈ ಸಮುದಾಯ ಭವನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲ ಕಂತಾಗಿ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಒಂದು ವರ್ಷದೊಳಗಾಗಿ ಸಮುದಾಯ ಭವನವನ್ನು ಪೂರ್ಣಗೊಳಿಸಲಾಗುವುದು. ತಾಲೂಕಿನ ಶಿವನಿ, ಎಂ.ಸಿ.ಹಳ್ಳಿಗಳಿಗೆ ಸಮುದಾಯ ಭವನ ನಿರ್ಮಾಣ ಮಾಡಲು ತಲಾ 10 ಲಕ್ಷ ರೂ. ಮಂಜೂರಾಗಿದೆ. ತಾಲೂಕಿನಾದ್ಯಂತ ಎಲ್ಲ ಸಮಾಜದ ಸಮುದಾಯ ಭವನಗಳಿಗೆ ಸುಮಾರು 2 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಕರುಬ ಸಮಾಜದ ತಾಲೂಕು ಅಧ್ಯಕ್ಷ ಪದ್ಮರಾಜ್, ಪುರಸಭಾಧ್ಯಕ್ಷ ಟಿ.ಟಿ.ನಾಗರಾಜ್, ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಸದಸ್ಯರಾದ ಟಿ.ಎಸ್.ರಮೇಶ್, ಧರ್ಮರಾಜ್, ವರ್ಮಪ್ರಕಾಶ್, ಈರಣ್ಣ, ಗಂಗಾಧರ್, ಮುಖಂಡರಾದ ಹಾಲುವಜ್ರಪ್ಪ, ಎಂ.ಬಿ.ರಾಮಚಂದ್ರಪ್ಪ, ಪಾಂಡುರಂಗಪ್ಪ, ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು.







