ಪುದುಚೇರಿ :ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಅಧಿಕಾರಕ್ಕೆ
5 ರಾಜ್ಯಗಳ ಚುನಾವಣಾ ಫಲಿತಾಂಶ

ಪುದುಚೇರಿ,ಮೇ 19: ಅಸ್ಸಾಂ ಮತ್ತು ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ಗೆ ಪುದುಚೇರಿ ಕೊಂಚ ಸಮಾಧಾನವನ್ನು ತಂದಿದೆ. ಈ ಪುಟ್ಟ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರವನ್ನು ಕಿತ್ತುಕೊಂಡಿರುವ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಕೂಟ ವಿಧಾನಸಭೆಯ 30 ಸ್ಥಾನಗಳ ಪೈಕಿ 17ರಲ್ಲಿ ಗೆಲುವು ಸಾಧಿಸುವ ಮೂಲಕ ಸರಳ ಬಹುಮತವನ್ನು ಪಡೆದುಕೊಂಡಿದೆ.
ಇದರೊಂದಿಗೆ ಕಾಂಗ್ರೆಸ್ 2011ರ ವಿಧಾನಸಭಾ ಚುನಾವಣೆಯಲ್ಲಿ ಎಐಎನ್‌ಆರ್‌ಸಿ ಸ್ಥಾಪಕ ಎನ್.ರಂಗಸ್ವಾಮಿ ಅವರಿಂದ ಅನುಭವಿಸಿದ್ದ ಸೋಲಿನ ಮುಯ್ಯಿ ತೀರಿಸಿಕೊಂಡಿದೆ. ರಂಗಸ್ವಾಮಿ ಕಾಂಗ್ರೆಸ್‌ನಿಂದ ಪ್ರತ್ಯೇಕಗೊಂಡು ಎಐಎನ್‌ಆರ್‌ಸಿ ಸ್ಥಾಪಿಸಿ ಅಧಿಕಾರದ ಗದ್ದುಗೆಯನ್ನೇರಿದ್ದರೆ ಮಾತೃಪಕ್ಷವು ಕೇವಲ ಎಂಟು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿ ಬಂದಿತ್ತು.
ಗುರುವಾರ ನಡೆದ ಮತ ಎಣಿಕೆಯಲ್ಲಿ 21 ಸ್ಥಾನಗಳಿಗೆ ಸ್ಪರ್ಧಿಸಿದ್ದ ಕಾಂಗ್ರೆಸ್ 15ರಲ್ಲಿ ಗೆಲುವು ಸಾಧಿಸಿದ್ದರೆ ಮಿತ್ರಪಕ್ಷ ಡಿಎಂಕೆ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ತನ್ಮೂಲಕ ಉಭಯ ಪಕ್ಷಗಳ ಮೈತ್ರಿಕೂಟ ಸರಳ ಬಹುಮತವನ್ನು ಸಾಧಿಸಿದೆ.
ಏಕಾಂಗಿಯಾಗಿ ಸ್ಫರ್ಧಿಸಿದ್ದ ಎಡಿಎಂಕೆ ನಾಲ್ಕು ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
ಮಾಹೆಯಲ್ಲಿ ಪೀಪಲ್ಸ್ ವೆಲ್ಫೇರ್ ಅಲಯನ್ಸ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ವಿ.ರಾಮಚಂದ್ರನ್ ಅವರು ಕಾಂಗ್ರೆಸ್‌ನ ಪ್ರಬಲ ಪ್ರತಿಸ್ಪರ್ಧಿ ಇ.ವಲ್ಸರಾಜ್ ಅವರಿಗೆ ಸೋಲಿನ ರುಚಿಯನ್ನುಣಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ನಿರ್ಗಮನ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ವಿ.ವೈದ್ಯಲಿಂಗಂ(ಕಾಮರಾಜನಗರ) ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ನಮಶಿವಾಯಂ(ವಿಳಿಯನ್ನೂರು) ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಪ್ರಮುಖರಾಗಿದ್ದಾರೆ.
ಕಾರೈಕಲ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿಯ ಶಾಸಕ ಎಎಂಎಚ್ ನಝೀಂ ಅವರು ಎಡಿಎಂಕೆಯ ಕೆಎಯು ಅಸನಾ ಅವರಿಂದ ಕೇವಲ 20 ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ.
ಚುನಾವಣೆಗೆ ಮುನ್ನ ಎಡಿಎಂಕೆಗೆ ಹಾರಿದ್ದ ಮಾಜಿ ಕಾಂಗ್ರೆಸ್ ನಾಯಕ ಪಿ.ಕಣ್ಣನ್ ಅವರು ರಾಜಭವನ ಕ್ಷೇತ್ರದಲ್ಲಿ ತನ್ನ ಶಿಷ್ಯ ಕೆ.ಲಕ್ಷ್ಮೀನಾರಾಯಣ ಅವರಿಂದ ಪರಾಭವಗೊಂಡಿದ್ದಾರೆ.
ಪಕ್ಷದ ಸ್ಥಾಪಕ ಹಾಗೂ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಅವರು ಗೆದ್ದಿರುವ ಇಂದಿರಾ ನಗರ ಸೇರಿದಂತೆ ಕೇವಲ ಎಂಟು ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಎಐಎನ್‌ಆರ್‌ಸಿಗೆ ಸಾಧ್ಯವಾಗಿದೆ.
ಡಿಎಂಡಿಕೆ,ಎಂಡಿಎಂಕೆ,ಸಿಪಿಎಂ ಮತ್ತು ಆರ್‌ಎಸ್‌ಪಿಗಳ ಮೈತ್ರಿಕೂಟ ಪಿಡಬ್ಲೂಎ 28 ಸ್ಥಾನಗಳಿಗೆ ಸ್ಪರ್ಧಿಸಿ ಶೂನ್ಯ ಸಾಧನೆ ಮಾಡಿದೆ. ಬಿಜೆಪಿಯದ್ದೂ ಇದೇ ಕಥೆ. ಎಲ್ಲ 30 ಸ್ಥಾನಗಳಿಗೆ ಸ್ಪಧಿಸಿದ್ದ ಅದು ಯಾವುದೇ ಸ್ಥಾನವನ್ನು ಗೆಲ್ಲುವುದರಲ್ಲಿ ವಿಫಲಗೊಂಡಿದೆ.
ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಸರಳ ಬಹುಮತವನ್ನು ಗೆಲ್ಲುವುದರೊಂದಿಗೆ ಮುಖ್ಯಮಂತ್ರಿ ಆಯ್ಕೆಯ ಮೇಲೆ ಎಲ್ಲರ ಗಮನ ಹರಿದಿದೆ. ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಯಾರನ್ನೂ ಹೆಸರಿಸಿರದಿದ್ದರೂ, ನಮಶಿವಾಯಂ ಮತ್ತು ವೈದ್ಯಲಿಂಗಂ ಈ ಪ್ರತಿಷ್ಠಿತ ಹುದ್ದೆಗೆ ಪೈಪೋಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.





