ಕೇರಳ ಮುಖ್ಯಮಂತ್ರಿ ಯಾರು?
ರೇಸ್‌ನಲ್ಲಿ ಪಿಣರಾಯಿ-ಅಚ್ಯುತಾನಂದನ್
ತಿರುವನಂತಪುರ, ಮೇ 19: ಸಿಪಿಎಂ ನಾಯಕರಾದ ಪಿಣರಾಯಿ ವಿಜಯ್‌ನ ಹಾಗೂ ವಿ.ಎಸ್.ಅಚ್ಯುತಾನಂದನ್ ಇಬ್ಬರೂ ಕ್ರಮವಾಗಿ ತಮ್ಮ ಕ್ಷೇತ್ರಗಳಾದ ಧರ್ಮಾಡಂ ಹಾಗೂ ಮಲಪ್ಪುರಗಳಲ್ಲಿ ಗಮನಾರ್ಹ ಅಂತರದಿಂದ ವಿಜಯ ಶಾಲಿಗಳಾಗಿದ್ದಾರೆ.
ಪಕ್ಷವು, ಹಲವು ದಶಕಗಳಿಂದ ಪರಸ್ಪರ ವಿರೋಧೀಗಳಾಗಿರುವ ಈ ಇಬ್ಬರು ನಾಯಕರೊಳಗೆ ಒಬ್ಬನನ್ನು ಮುಖ್ಯಮಂತ್ರಿ ಹುದ್ದೆಗಾಗಿ ಶುಕ್ರವಾರ ಆರಿಸಲಿದೆ.
ವಿಜಯ್ (72) ಅವರು ಧರ್ಮಾಡ ಕ್ಷೇತ್ರವನ್ನು 36,902 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ಚಲಾವಣೆಯಾದ ಒಟ್ಟು 1,53,627 ಮತಗಳಲ್ಲಿ ಶೇ.56.8ರಷ್ಟನ್ನು ಬಾಚಿಕೊಂಡಿದ್ದಾರೆ. ಕಾಂಗ್ರೆಸ್‌ನ ಮಂಬರಂ ದಿವಾಕರನ್ 50,424 ಮತ ಗಳಿಸಿ 2ನೆಯ ಸ್ಥಾನ ಪಡೆದರೆ, ಬಿಜೆಪಿಯ ಮೋಹನನ್ ಮಾನಂತೇರಿ 12,763 ಮತಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದಾರೆ. 1998ರಲ್ಲಿ ವಿದ್ಯುತ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ವಿಜಯನ್ ಇದೇ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಅಚ್ಯುತಾನಂದನ್ ಮಲಪ್ಪುರ ಕ್ಷೇತ್ರವನ್ನು 21,142 ಮತಗಳಿಂದ ಗೆದ್ದಿದ್ದಾರೆ. ಚಲಾವಣೆಯಾಗಿದ್ದ 1,59,710 ಮತಗಳಲ್ಲಿ ಅವರು, 73,299 ಮತಗಳನ್ನು (ಅಂದಾಜು ಶೇ.459) ಗಳಿಸಿದ್ದಾರೆ. 92ರ ಹರೆಯದ ಅವರು ಬಿಜೆಪಿಯ ಸಿ.ಕೃಷ್ಣಕುಮಾರ್‌ರನ್ನು (46,157) ಸೋಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಜಾಯ್ 35,333 ಮತಗಳೊಂದಿಗೆ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ರಾಜ್ಯದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಅಚ್ಯುತಾನಂದನ್,2006ರಿಂದ 2011ರವರೆಗೆ ಮುಖ್ಯಮಂತ್ರಿಯಾಗಿದ್ದರು. ಬಳಿಕ ಅವರನ್ನು ಯುಡಿಎಫ್‌ನ ಉಮ್ಮನ್ ಚಾಂಡಿ ಕೆಳಗಿಳಿಸಿದ್ದರು.





