ಪುಸ್ತಕಗಳಲ್ಲಿ ‘ಜೀವನ ಶೈಲಿ’ಯ ಪಾಠಕ್ಕೆ ಚಿಂತನೆ: ಸಚಿವ ಯು.ಟಿ.ಖಾದರ್
ಶತಾಯು ಆಯುರ್ವೇದ ಸಂಸ್ಥೆಯ 115ನೆ ವಾರ್ಷಿಕೋತ್ಸವ

ಬೆಂಗಳೂರು, ಮೇ 19: ಶಾಲಾ ಮಕ್ಕಳಿಗೆ ‘ಜೀವನ ಶೈಲಿ’ ಕುರಿತು ತಿಳಿಯಪಡಿಸುವ ಹಿನ್ನೆಲೆಯಲ್ಲಿ ಪ್ರಾಥಮಿಕ ಪಠ್ಯ ಪುಸ್ತಕಗಳಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಾಹಿತಿಯನ್ನು ಅಳವಡಿಸುವ ಬಗ್ಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಶತಾಯು ಆಯುರ್ವೇದ ಸಂಸ್ಥೆಯ 115ನೆ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ, ಕೊಬ್ಬು ನಿಯಂತ್ರಣ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳನ್ನು ರೋಗಗಳಿಂದ ಕಾಪಾಡಲು ಸ್ವಚ್ಛತೆಯ ಅರಿವು ಅಗತ್ಯವಿದ್ದು, ಈ ಬಗ್ಗೆ ಹೆಚ್ಚು ಗಮನ ನೀಡುವ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲಾ ಪಠ್ಯ ಪುಸ್ತಕಗಳಲ್ಲಿಯೇ ಜೀವನ ಶೈಲಿಯ ಮಾಹಿತಿ ಅಳವಡಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ, ತಮ್ಮ ಅಭಿಪ್ರಾಯಗಳನ್ನು ಮಂಡಿಸಲಾಗುವುದೆಂದು ಅವರು ಹೇಳಿದರು.
ಜೀವನ ಶೈಲಿ ಪಠ್ಯಗಳಲ್ಲಿ ಮಕ್ಕಳು ಸ್ವಚ್ಛವಾಗಿ ಹೇಗಿರಬೇಕು, ತಿಂಡಿ-ತಿನಿಸುಗಳು ಯಾವ ಕಾಲಕ್ಕೆ ಸೂಕ್ತ, ನಮ್ಮ ಪರಿಸರದ ಬಗ್ಗೆ ಜಾಗೃತಿ ಸೇರಿದಂತೆ ಇತರೆ ಪಾಠಗಳು ಜೀವನ ಶೈಲಿಯಲ್ಲಿ ಬರಲಿವೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಶೀಘ್ರದಲ್ಲಿಯೇ ವಿವಿಧ ಕ್ಷೇತ್ರದ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದೆಂದು ಖಾದರ್ ತಿಳಿಸಿದರು.
ಆಯುರ್ವೇದ ವಿದ್ಯಾರ್ಥಿಗಳಿಗೆ ಈ ಕ್ಷೇತ್ರದಲ್ಲಿ ಭವಿಷ್ಯವಿದೆ. ಆದರೆ, ಆಯುರ್ವೇದ ಪರಿಣಾಮ ಮತ್ತು ಉಪಯೋಗಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸುವ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಆಯುರ್ವೇದ ತಜ್ಞರು ಜಾಗೃತಿ ಚಟುವಟಿಕೆಗಳನ್ನು ರೂಪಿಸಬೇಕು. ಅಲ್ಲದೆ, ನಾವು ಬಾಲ್ಯದಲ್ಲಿದ್ದಾಗ ಸಣ್ಣಪುಟ್ಟ ಕಾಯಿಲೆಗಳಿಗೆ ಆಯುರ್ವೇದ ಪದ್ಧತಿಯ ಮದ್ದು ನೀಡಲಾಗುತ್ತಿತ್ತು. ಅದರ ಪರಿಣಾಮಕಾರಿ ಉಪಯೋಗಗಳ ಬಗ್ಗೆ ಮಾಹಿತಿಯನ್ನು ಪೋಷಕರು ನೀಡುತ್ತಿದ್ದರು ಎಂದು ಸ್ಮರಿಸಿದರು.
ಇದೀಗ ಎಲ್ಲರೂ ಅಲೋಪತಿಯ ಸ್ವಯಂ ವೈದ್ಯರಾಗಿ ತಾವೇ ಚಿಕಿತ್ಸೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದ ಅವರು, ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಆಯುರ್ವೇದ ಪದ್ಧತಿಯ ಬಗ್ಗೆ ಅರಿವು ಮೂಡಿಸಲು ರಾಜ್ಯದ ಆರೋಗ್ಯ ಇಲಾಖೆ ಮುಂದಾಗಿದೆ. ಅಲ್ಲದೆ, ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ 50 ಹಾಸಿಗೆ ಸಾಮರ್ಥ್ಯದ ಆಯುರ್ವೇದ ಆಸ್ಪತ್ರೆಗಳನ್ನು ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರಗಳಲ್ಲಿ 10 ಹಾಸಿಗೆ ಸಾಮರ್ಥ್ಯದ ಆಯುರ್ವೇದ ಆಸ್ಪತ್ರೆಗಳನ್ನು ತೆರೆಯುವ ಯೋಜನೆಯೂ ಸರಕಾರದ ಮುಂದಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆರೋಗ್ಯ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡು ಜನರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರಕದಿದ್ದರೆ ಭವಿಷ್ಯದಲ್ಲಿ ಭಾರತ ಅಪಾಯಕ್ಕೆ ಸಿಲುಕಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಗ್ಯಾಟ್ ಒಪ್ಪಂದ ಆಗಿ 15 ವರ್ಷಗಳು ಕಳೆದರೂ ದೇಶದ ಶೇ.30 ರಷ್ಟು ಜನರಿಗೆ ಆರೋಗ್ಯ ಸೌಲಭ್ಯಗಳು ಇನ್ನು ಸಿಕ್ಕಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಭಾರತಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದ ಅವರು, ಖಾಸಗಿ ಆರೋಗ್ಯ ವಲಯದಲ್ಲಿ ಸ್ಪರ್ಧೆ ಹಾಗೂ ದುಬಾರಿ ದರದಿಂದ ಜನಸಾಮಾನ್ಯರಿಗೆ ಖಾಸಗಿ ಆರೋಗ್ಯ ವಲಯ ಕೈಗೆಟುಕುತ್ತಿಲ್ಲ ಎಂದು ವಿಷಾದಿಸಿದರು.
ಸಮಾರಂಭದಲ್ಲಿ ಶಾಸಕ ಈಶ್ವರ್ ಖಂಡ್ರೆ, ಶತಾಯು ಸಂಸ್ಥೆಯ ಡಾ.ಅನಿತಾ ಭಟ್, ನಿರ್ವಹಣಾಧಿಕಾರಿ ಡಾ.ಕೃಷ್ಣ ಜೆ, ಡಾ.ಮೃತ್ಯುಂಜಯಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.





