ಉಬೇರ್ ಕಪ್: ಭಾರತ ಸೆಮಿಫೈನಲ್‌ಗೆ

ಕುನ್ಶಾನ್(ಚೀನಾ), ಮೇ 19: ಉಬೇರ್ ಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಥಾಯ್ಲೆಂಡ್ ತಂಡವನ್ನು 3-1 ಅಂತರದಿಂದ ಮಣಿಸಿರುವ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ತಂಡ ಕನಿಷ್ಠ ಕಂಚಿನ ಪದಕವನ್ನು ದೃಢಪಡಿಸಿದೆ.
ಹೊಸದಿಲ್ಲಿಯಲ್ಲಿ ನಡೆದ ಕಳೆದ ಆವೃತ್ತಿಯ ಉಬೇರ್ ಕಪ್‌ನಲ್ಲಿ ಜಪಾನ್ ವಿರುದ್ಧ ಸೆಮಿ ಫೈನಲ್ ಪಂದ್ಯವನ್ನು ಸೋತಿದ್ದ ಭಾರತದ ಮಹಿಳಾ ತಂಡ ಕಂಚಿನ ಪದಕವನ್ನು ಜಯಿಸುವ ಮೂಲಕ ಇತಿಹಾಸ ಬರೆದಿತ್ತು.
ಗುರುವಾರ ಇಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಅಗ್ರ ಶಟ್ಲರ್ ಸೈನಾ ನೆಹ್ವಾಲ್, ಪಿ.ವಿ.ಸಿಂಧು ಸಿಂಗಲ್ಸ್ ವಿಭಾಗಗಳಲ್ಲಿ ಜಯ ಸಾಧಿಸಿದರೆ, ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಡಬಲ್ಸ್‌ನಲ್ಲಿ ಜಯ ಸಾಧಿಸಿದ್ದರು.
ಭಾರತ ಶುಕ್ರವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಆತಿಥೇಯ ಚೀನಾ ತಂಡವನ್ನು ಎದುರಿಸುವ ಸಾಧ್ಯತೆಯಿದೆ. 2013ರ ವಿಶ್ವ ಚಾಂಪಿಯನ್ ರಚಾನೊಕ್ ಇಂತನಾನ್‌ರನ್ನು 21-12, 21-19 ಗೇಮ್‌ಗಳ ಅಂತರದಿಂದ ಮಣಿಸಿದ ಸೈನಾ ಭಾರತಕ್ಕೆ ಥಾಯ್ಲೆಂಡ್ ವಿರುದ್ಧ 1-0 ಮುನ್ನಡೆ ಒದಗಿಸಿಕೊಟ್ಟರು.
ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.10ನೆ ಆಟಗಾರ್ತಿ ಸಿಂಧು ಬುಸನಾನ್ ರನ್ನು 21-18, 21-7 ಗೇಮ್‌ಗಳ ಅಂತರದಿಂದ ಸೋಲಿಸಿ ತಂಡದ ಮುನ್ನಡೆಯನ್ನು 2-0ಗೆ ತಲುಪಿಸಿದರು.
ಮೊದಲ ಡಬಲ್ಸ್ ಪಂದ್ಯದಲ್ಲಿ 2010ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಜ್ವಾಲಾ ಹಾಗೂ ಅಶ್ವಿನಿ 39 ನಿಮಿಷಗಳ ಸ್ಪರ್ಧೆಯಲ್ಲಿ ಪುಟಿಟಾ ಸುಪಜಿರಕುಲ್ ಹಾಗೂ ಸಪ್‌ಸಿರಿ ತರಟನಾಚೈರನ್ನು 21-19, 21-12 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.
19ರ ಹರೆಯದ ಯುವ ಶಟ್ಲರ್ ಋತ್ವಿಕಾ ಶಿವಾನಿಗಾಡೆ ವಿಶ್ವದ ನಂ.25ನೆ ಆಟಗಾರ್ತಿ ನಿಟ್‌ಚಾಯೊನ್‌ರನ್ನು 21-18, 21-16 ಗೇಮ್‌ಗಳ ಅಂತರದಿಂದ ಮಣಿಸಿ ಭಾರತಕ್ಕೆ 3-1 ಅಂತರದ ಗೆಲುವು ತಂದುಕೊಟ್ಟರು.







