ತ್ರಿಕೋನ ಸರಣಿ: ವೆಸ್ಟ್‌ಇಂಡೀಸ್ ತಂಡ ಪ್ರಕಟ
ಪೊಲಾರ್ಡ್, ನರೇನ್ ವಾಪಸ್
ಜಮೈಕಾ, ಮೇ 19: ಆಸ್ಟೇಲಿಯ ಹಾಗೂ ದಕ್ಷಿಣ ಆಫ್ರಿಕ ವಿರುದ್ಧದ ತ್ರಿಕೋನ ಏಕದಿನ ಸರಣಿಯ ಮೊದಲ ನಾಲ್ಕು ಪಂದ್ಯಗಳಿಗೆ ವೆಸ್ಟ್‌ಇಂಡೀಸ್ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಆಲ್‌ರೌಂಡರ್ ಕೀರನ್ ಪೊಲಾರ್ಡ್ ಹಾಗೂ ಆಫ್-ಸ್ಪಿನ್ನರ್ ಸುನೀಲ್ ನರೇನ್ ತಂಡಕ್ಕೆ ವಾಪಸಾಗಿದ್ದಾರೆ.
ಇದೀಗ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಪೊಲಾರ್ಡ್ ಅಕ್ಟೋಬರ್ 2014ರಲ್ಲಿ ಕೊನೆಯ ಬಾರಿ ಏಕದಿನ ಪಂದ್ಯವನ್ನು ಆಡಿದ್ದರು. ಐಪಿಎಲ್‌ನಲ್ಲಿ ಪ್ರಸ್ತುತ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಆಡುತ್ತಿರುವ ನರೇನ್ ನವೆಂಬರ್ 2015ರಲ್ಲಿ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದರು.
15 ಸದಸ್ಯರ ತಂಡಕ್ಕೆ ಜೇಸನ್‌ಹೋಲ್ಡರ್ ನಾಯಕನಾಗಿದ್ದು, ಇಬ್ಬರು ಹೊಸ ಆಟಗಾರರಾದ ಅಶ್ಲೇ ನರ್ಸ್ ಹಾಗೂ ಶಾನನ್ ಗಾಬ್ರಿಯೆಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕ್ರಿಸ್ ಗೇಲ್ ಹಾಗೂ ಡ್ವೇಯ್ನಿ ಬ್ರಾವೊಗೆ ಸ್ಥಾನ ಕಲ್ಪಿಸಲಾಗಿಲ್ಲ.
ತ್ರಿಕೋನ ಸರಣಿ ಜೂ.3 ರಂದು ಗಯಾನದಲ್ಲಿ ಆರಂಭವಾಗಲಿದೆ. ವೆಸ್ಟ್‌ಇಂಡೀಸ್ ತಂಡ: ಜೇಸನ್ ಹೋಲ್ಡರ್(ನಾಯಕ), ಸುಲೇಮಾನ್ ಬೆನ್, ಕಾರ್ಲಸ್ ಬ್ರಾಥ್‌ವೈಟ್, ಡರೆನ್ ಬ್ರಾವೊ, ಜೋನಾಥನ್ ಕಾರ್ಟರ್, ಜಾನ್ಸನ್ ಚಾರ್ಲ್ಸ್, ಆ್ಯಂಡ್ರೆ ಫ್ಲೆಚರ್, ಶಾನನ್ ಗಾಬ್ರಿಯೆಲ್, ಸುನೀಲ್ ನರೇನ್, ಅಶ್ಲೇ ನರ್ಸ್, ಕೀರನ್ ಪೊಲಾರ್ಡ್, ದಿನೇಶ್ ರಾಮ್ದೀನ್, ಮರ್ಲಾನ್ ಸ್ಯಾಮುಯೆಲ್ಸ್, ಜೆರೊಮ್ ಟೇಲರ್.







