ಮೇರಿ ಕೋಮ್,ಸರಿತಾದೇವಿ ಶುಭಾರಂಭ

ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್
ಅಸ್ಟಾನಾ, ಮೇ 19: ಐದು ಬಾರಿಯ ಚಾಂಪಿಯನ್ ಎಂ.ಸಿ. ಮೇರಿ ಕೋಮ್(51 ಕೆ.ಜಿ.) ಹಾಗೂ ಎಲ್. ಸರಿತಾದೇವಿ(60 ಕೆ.ಜಿ.) ಎಐಬಿಎ ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಗುರುವಾರ ಇಲ್ಲಿ ನಡೆದ ಮೊದಲ ಸುತ್ತಿನ 51 ಕೆಜಿ ತೂಕ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೇರಿ ಕೋಮ್ ಸ್ವೀಡನ್‌ನ ಜುಲಿಯಾನ ಸೋಡರ್‌ಸ್ಟ್ರೋಮ್‌ರನ್ನು 3-0 ಅಂತರದಿಂದ ಮಣಿಸಿದರು.
ಮತ್ತೊಂದು ಪಂದ್ಯದಲ್ಲಿ ಸರಿತಾ ಬೆಲಾರಿಸ್‌ನ ಆಲಾ ಯಾರ್ಶ್ವೆವಿಕ್‌ರನ್ನು 3-0 ಅಂತರದಿಂದ ಸೋತಿದ್ದಾರೆ. ಸ್ವೀಡನ್ ಬಾಕ್ಸರ್ ವಿರುದ್ಧ ಏಕಪಕ್ಷೀಯವಾಗಿ ಗೆಲುವು ಸಾಧಿಸಿರುವ ಮೇರಿ ಕೋಮ್ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಜರ್ಮನಿಯ ಅಝಿಝ್ ನಿಮಾನಿ ಅವರನ್ನು ಹಾಗೂ ಸರಿತಾದೇವಿ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಮೆಕ್ಸಿಕೊದ ವಿಕ್ಟೋರಿಯಾ ಟೊರ್ರೆಸ್‌ರನ್ನು ಎದುರಿಸಲಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ಮೇರಿ ಕೋಮ್ ಹಾಗೂ ಸರಿತಾದೇವಿ ಈ ಟೂರ್ನಿಯಲ್ಲಿ ಪದಕವನ್ನು ಜಯಿಸುವ ಮೂಲಕ ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವತ್ತ ಚಿತ್ತವಿರಿಸಿದ್ದಾರೆ.
ಒಲಿಂಪಿಕ್ಸ್‌ನ 51 ಕೆಜಿ, 60 ಕೆಜಿ ಹಾಗೂ 75 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಲಿರುವ ಮಹಿಳಾ ಬಾಕ್ಸರ್‌ಗಳಿಗೆ ಈ ಪ್ರತಿಷ್ಠಿತ ಟೂರ್ನಿಯು ಒಲಿಂಪಿಕ್ಸ್‌ಗೆ ತೇರ್ಗಡೆಯಾಗಲು ಇರುವ ಕೊನೆಯ ಅರ್ಹತಾ ಟೂರ್ನಿಯಾಗಿದೆ





