ಕೇರಳದಲ್ಲಿ ಖಾತೆ ತೆರೆದ ಬಿಜೆಪಿ: ಇತಿಹಾಸ ಸೃಷ್ಟಿಸಿದ ರಾಜಗೋಪಾಲ

ತಿರುವನಂತಪುರ,ಮೇ 19: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಒ.ರಾಜಗೋಪಾಲ ಅವರು ಗುರುವಾರ ಇಲ್ಲಿಯ ನೆಮಮ್ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದರೊಂದಿಗೆ ಕೇರಳದಲ್ಲಿ ಬಿಜೆಪಿಯ ಪಾಲಿಗೆ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಸತತ ಸೋಲುಗಳ ಬಳಿಕ ರಾಜ್ಯ ವಿಧಾನಸಭೆಯಲ್ಲಿ ತನ್ನ ಖಾತೆಯನ್ನು ತೆರೆಯುವಲ್ಲಿ ಬಿಜೆಪಿ ಕೊನೆಗೂ ಯಶಸ್ಸು ಪಡೆದಿದೆ.
ವಿಧಾನಸಭೆಯಲ್ಲಿ ತನ್ನ ಖಾತೆಯನ್ನು ತೆರೆಯಲು ಈ ಬಾರಿ ಬಿಜೆಪಿ ನೆಚ್ಚಿಕೊಂಡಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ನೆಮಮ್ ಒಂದಾಗಿತ್ತು.
ಹಿಂದಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅಲ್ಪ ಅಂತರದಿಂದ ಸೋಲು ಕಂಡಿದ್ದ ರಾಜಗೋಪಾಲ ಈ ಬಾರಿ ಹಾಲಿ ಶಾಸಕ ಹಾಗು ಸಿಪಿಎಂ ನಾಯಕ ವಿ.ಶಿವನ್ ಕುಟ್ಟಿ ಅವರನ್ನು 8,671 ಮತಗಳ ಅಂತರದಿಂದ ಸೋಲಿಸಿ ಕ್ಷೇತ್ರದಲ್ಲಿ ಆಧಿಪತ್ಯ ಸಾಧಿಸಿದ್ದಾರೆ.
ಇತರ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಉಳಿದವರಿಗಿಂತ ಎಷ್ಟೋ ಹಿಂದಿದ್ದರೆ ರಾಜಗೋಪಾಲ ಮತಎಣಿಕೆಯ ಆರಂಭದಿಂದಲೇ ಮುನ್ನಡೆ ಸಾಧಿಸಿದ್ದರು.
ಎ.ಬಿ.ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದ ರಾಜಗೋಪಾಲ 2011ರ ವಿಧಾನಸಭಾ ಕ್ಷೇತ್ರದಲ್ಲಿ ಈ ಕ್ಷೇತ್ರದಲ್ಲಿ ಶಿವನ್ ಕುಟ್ಟಿಯವರಿಂದ ಕೂದಲೆಳೆಯ ಅಂತರದಿಂದ ಸೋಲಿಸಲ್ಪಟ್ಟಿದ್ದರು. ಹೀಗಾಗಿ ಈ ಬಾರಿ ಪ್ರತೀಕಾರ ತೀರಿಸಿಕೊಂಡ ತೃಪ್ತಿ ಅವರದಾಗಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 43,661 ಮತಗಳಿಗೆ ಅವರು ತೃಪ್ತಿ ಪಟ್ಟುಕೊಳ್ಳಬೇಕಾಗಿ ಬಂದಿತ್ತು. ಕಳೆದ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ನೆಮಮ್‌ನ ಒಟ್ಟು 22 ವಾರ್ಡ್‌ಗಳ ಪೈಕಿ ಬಿಜೆಪಿ ಮತ್ತು ಎಲ್‌ಡಿಎಫ್ ತಲಾ ಒಂಬತ್ತನ್ನು ಗೆದ್ದಿದ್ದರೆ,ನಾಲ್ಕು ವಾರ್ಡ್‌ಗಳು ಯುಡಿಎಫ್ ಪಾಲಾಗಿದ್ದವು.







