ಏನು, ಚೀನಾ ನರಮಾಂಸವನ್ನು ಆಫ್ರಿಕಾಗೆ ರಫ್ತು ಮಾಡುತ್ತಿದೆಯೇ?

ಬೀಜಿಂಗ್, ಮೇ 20: ಝಾಂಬಿಯಕ್ಕೆ ಚೀನಾದ ರಾಯಭಾರಿ ಈ ವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡುವ ಅನಿವಾರ್ಯತೆಗೆ ಒಳಗಾದರು. ‘‘ಆಫ್ರಿಕದಲ್ಲಿ ಚೀನಾದ ಪ್ರತಿಷ್ಠೆಗೆ ಮಸಿ ಬಳಿಯುತ್ತಿರುವ’’ ಈ ಅಪಪ್ರಚಾರವನ್ನು ಎದುರಿಸುವ ಉದ್ದೇಶದಿಂದ ಅವರು ಹೇಳಿಕೆಯನ್ನು ಬಿಡುಗಡೆ ಮಾಡಬೇಕಾಯಿತು. ‘‘ಈ ಸುದ್ದಿ ಅತ್ಯಂತ ದುರುದ್ದೇಶಪೂರಿತ, ಆಧಾರರಹಿತ ಹಾಗೂ ಬಲಿಪಶು ಮಾಡುವ ಉದ್ದೇಶದಿಂದ ಕೂಡಿದೆ ಹಾಗೂ ಇದು ನಮಗೆ ಯಾವ ಕಾರಣಕ್ಕೂ ಸ್ವೀಕಾರಾರ್ಹವಲ್ಲ’’ ಎಂದು ರಾಯಭಾರಿ ಯಾಂಗ್ ಯೂಮಿಂಗ್ ತನ್ನ ಹೇಳಿಕೆಯಲ್ಲಿ ಹೇಳಿದರು. ಅವರ ಹೇಳಿಕೆ ಚೀನಾದ ಸರಕಾರಿ ಮಾಧ್ಯಮದಲ್ಲಿ ವ್ಯಾಪಕವಾಗಿ ವರದಿಯಾಯಿತು.
ಹಾಗಾದರೆ, ಆ ಅಪಪ್ರಚಾರವಾದರೂ ಏನು? ಚೀನಾ ಮೃತದೇಹಗಳನ್ನು ಸಂಗ್ರಹಿಸಿ ಅದಕ್ಕೆ ಉಪ್ಪು, ಹುಳಿ, ಖಾರ, ಮಸಾಲೆ ಹಚ್ಚಿ ಕ್ಯಾನ್‌ಗಳಲ್ಲಿ ತುಂಬಿಸಿ ಆಫ್ರಿಕದ ಸೂಪರ್‌ಮಾರ್ಕೆಟ್‌ಗಳಲ್ಲಿ ಮಾರಾಟ ಮಾಡುತ್ತದೆ.
ಝಾಂಬಿಯದ ಟ್ಯಾಬ್ಲಾಯ್ಡಾ ಪತ್ರಿಕೆಗಳು ಈ ಅಪಪ್ರಚಾರವನ್ನು ಹರಡುತ್ತಿವೆ ಎಂದು ಚೀನಾದ ಮಾಧ್ಯಮ ಆರೋಪಿಸಿದೆ. ‘‘ಬೇರೆಯದೇ ಆದ ಉದ್ದೇಶ ಹೊಂದಿರುವ ಜನರು ಝಾಂಬಿಯ ಮತ್ತು ಚೀನಾಗಳ ನಡುವಿನ ಸುದೀರ್ಘ ಬಾಂಧವ್ಯಕ್ಕೆ ಹುಳಿ ಹಿಂಡಲು ಯತ್ನಿಸುತ್ತಿದ್ದಾರೆ’’ ಎಂದು ಅವು ಆರೋಪಿಸಿವೆ.
ಚೀನಾದಲ್ಲಿ ಸತ್ತವರನ್ನು ಹೂಳಲು ಜಾಗದ ಕೊರತೆ ಕಾಡುತ್ತಿದೆ, ಹಾಗಾಗಿ ಮಾನವ ಮಾಂಸ ಉತ್ಪಾದನೆ ಪ್ರವೃತ್ತಿ ಚೀನಾದಲ್ಲಿ ಆರಂಭಗೊಂಡಿದೆ ಎಂಬುದಾಗಿ ಚೀನಾದ ಮಾಂಸದ ಕಾರ್ಖಾನೆಗಳಲ್ಲಿ ಕೆಲಸ ಮಾಡಿದ್ದರೆನ್ನಲಾದ ಜನರನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಬೀಜಿಂಗ್ ತನ್ನ ಉತ್ತಮ ಹಾಗೂ ಮಾನವೇತರ ಮಾಂಸವನ್ನು ಹೆಚ್ಚು ಶಕ್ತಿಶಾಲಿ ದೇಶಗಳಿಗೆ ಮೀಸಲಿಡುತ್ತದೆ ಎಂದು ಇನ್ನೊಂದು ವರದಿ ಹೇಳುತ್ತದೆ.
ಆದರೆ, ವಾಸ್ತವಿಕವಾಗಿ ಇವೆಲ್ಲ ಗಾಳಿ ಸುದ್ದಿಗಳಲ್ಲದೆ ಬೇರೇನೂ ಅಲ್ಲ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ‘ಮಾನವ ಮಾಂಸ’ದ್ದೆಂಬಂತೆ ಕಂಡುಬರುವ ಚಿತ್ರಗಳು, 2012ರ ವೀಡಿಯೊ ಗೇಮ್ ‘ರೆಸಿಡೆಂಟ್ ಈವಲ್ 6’ರ ಮಾರ್ಕೆಟಿಂಗ್ ಸ್ಟಂಟ್‌ನ ಚಿತ್ರಗಳಾಗಿವೆ ಎಂಬುದನ್ನು ಗಾಳಿಸುದ್ದಿಗಳ ಸತ್ಯಾಸತ್ಯತೆಯನ್ನು ಪತ್ತೆಹಚ್ಚುವ ವೆಬ್‌ಸೈಟ್ ‘ಸ್ನೋಪ್ಸ್.ಕಾಮ್’ ಕಂಡುಕೊಂಡಿದೆ.
ಆದಾಗ್ಯೂ, ಈ ಗಾಳಿ ಸುದ್ದಿ ಚೀನಾದಲ್ಲಿ ಭಾರೀ ತಲ್ಲಣವನ್ನು ಉಂಟು ಮಾಡಿದೆ ಎನ್ನುವುದನ್ನು ಆ ದೇಶದ ಸರಕಾರಿ ಮಾಧ್ಯಮದಲ್ಲಿ ಅದಕ್ಕೆ ನೀಡಲಾದ ವ್ಯಾಪಕ ಪ್ರಚಾರವೇ ಸಾಕ್ಷಿಯಾಗಿದೆ.
ಈ ಗಾಳಿಸುದ್ದಿಗಳ ಬಗ್ಗೆ ಝಾಂಬಿಯ ತನಿಖೆ ನಡೆಸಬೇಕೆಂಬುದಾಗಿಯೂ ಯಾಂಗ್ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಝಾಂಬಿಯದ ಉಪ ರಕ್ಷಣಾ ಸಚಿವ ಕ್ರಿಸ್ಟೋಫರ್ ಮುಲೆಂಗ ಚೀನಾದ ಕ್ಷಮೆಯನ್ನೂ ಕೋರಿದರು. ‘‘ಝಾಂಬಿಯ ಮತ್ತು ಚೀನಾಗಳ ನಡುವೆ ಆತ್ಮೀಯ ಬಾಂಧವ್ಯ ನೆಲೆಸಿದ್ದು, ಈ ಊಹಾಪೋಹಗಳ ಬಗ್ಗೆ ಝಾಂಬಿಯ ವಿಷಾದ ವ್ಯಕ್ತಪಡಿಸುತ್ತದೆ’’ ಎಂದರು.
ಚೀನಾ ತುಂಬ ಹಿಂದಿನಿಂದಲೂ ಝಾಂಬಿಯದ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಝಾಂಬಿಯದ ಹಲವಾರು ಮಹತ್ವದ ಯೋಜನೆಗಳಿಗೆ ಅದು ನಿಧಿಯನ್ನೂ ಪೂರೈಸಿದೆ.
ಆದಾಗ್ಯೂ, ಝಾಂಬಿಯದ ಮೇಲೆ ಚೀನಾದ ಹೆಚ್ಚುತ್ತಿರುವ ಪ್ರಭಾವ ಸ್ಥಳೀಯರಲ್ಲಿ ಅಸಹನೆಗೆ ಕಾರಣವಾಗಿದೆ. ಝಾಂಬಿಯದಲ್ಲಿನ ತನ್ನ ಯೋಜನೆಗಳಲ್ಲಿ ಚೀನಾ ಕಡಿಮೆ ಸಂಬಳ ಮತ್ತು ಅಪಾಯಕಾರಿ ಕೆಲಸದ ವಾತಾವರಣವನ್ನು ಒದಗಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.







