ನನ್ನ ಅವಧಿಯಲ್ಲಿ ಚೀನಾ ಸರಿದಾರಿಗೆ ಬರುತ್ತದೆ: ಟ್ರಂಪ್

ವಾಶಿಂಗ್ಟನ್, ಮೇ 20: ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಚೀನಾವು ‘‘ಸರಿ ದಾರಿಗೆ ಬರುತ್ತದೆ’’ ಹಾಗೂ ಅದು ಅಮೆರಿಕದ ಮಿತ್ರನಾಗಿರುತ್ತದೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅದೇ ವೇಳೆ, ಕಮ್ಯುನಿಸ್ಟ್ ವಾಣಿಜ್ಯ ದೈತ್ಯ (ಚೀನಾ)ನೊಂದಿಗೆ ವ್ಯಾಪಾರ ಸಮರವೊಂದು ಏರ್ಪಟ್ಟರೂ ತಾನು ಲೆಕ್ಕಿಸುವುದಿಲ್ಲ ಎಂದಿದ್ದಾರೆ.
‘‘ನಾನೊಂದು ವಿಷಯ ಹೇಳುತ್ತೇನೆ. ಚೀನಾ ಸರಿದಾರಿಗೆ ಬರುತ್ತದೆ ಹಾಗೂ ಅದು ನಮ್ಮ ಮಿತ್ರನಾಗಿರುತ್ತದೆ. ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ನಾವು ಚೀನಾವನ್ನು ಉತ್ತಮವಾಗಿ ನಿಭಾಯಿಸುತ್ತೇವೆ ಹಾಗೂ ನನ್ನ ಅವಧಿಯಲ್ಲಿ ಆರ್ಥಿಕವಾಗಿಯೂ ನಾವು ಉತ್ತಮ ನಿರ್ವಹಣೆ ತೋರಿಸುತ್ತೇವೆ. ನಮ್ಮ ದೇಶವನ್ನು ಅವರು ಮತ್ತೆ ಗೌರವಿಸಲು ಆರಂಭಿಸುತ್ತಾರೆ’’ ಎಂದು ಗುರುವಾರ ನ್ಯೂಜರ್ಸಿಯಲ್ಲಿ ನಡೆದ ಚುನಾವಣಾ ಸಭೆಯೊಂದರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹೇಳಿದರು.
ಟ್ರಂಪ್ ಅಮೆರಿಕದ ಪ್ರಜಾಸತ್ತೆಗೆ ಅಪಾಯಕಾರಿ: ಹಿಲರಿ
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಸಂಭಾವ್ಯ ಎದುರಾಳಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ದೇಶದ ಪ್ರಜಾಸತ್ತೆಗೆ ಬೆದರಿಕೆಯಾಗಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಹಿಲರಿ ಕ್ಲಿಂಟನ್ ಗುರುವಾರ ಬಣ್ಣಿಸಿದ್ದಾರೆ ಹಾಗೂ ದೇಶದ ಯಜಮಾನರಾಗಲು ಅವರು ಅನರ್ಹರು ಎಂದು ಘೋಷಿಸಿದ್ದಾರೆ.
‘‘ಡೊನಾಲ್ಡ್ ನಮ್ಮ ದೇಶ, ನಮ್ಮ ಪ್ರಜಾಸತ್ತೆ ಮತ್ತು ನಮ್ಮ ಆರ್ಥಿಕತೆಗೆ ನಾಟಕೀಯ ಬೆದರಿಕೆ ಒಡ್ಡುತ್ತಿದ್ದಾರೆ’’ ಎಂದು ಸುದ್ದಿ ವಾಹಿನಿ ಸಿಎನ್‌ಎನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೇಳಿದರು.
ಉತ್ತರ ಕೊರಿಯದ ‘ಸರ್ವಾಧಿಕಾರಿ’ಯನ್ನು ಭೇಟಿಯಾಗಲು ಸಿದ್ಧ, ನ್ಯಾಟೊದಿಂದ ಅಮೆರಿಕ ಹಿಂದಕ್ಕೆ ಸರಿಯಬೇಕು ಹಾಗೂ ಕೆಲವು ಮಿತ್ರದೇಶಗಳು ಪರಮಾಣು ಅಸ್ತ್ರಗಳನ್ನೆು ಹೊಂದಲು ಅವಕಾಶ ನೀಡಬೇಕು ಎಂಬ ಟ್ರಂಪ್‌ರ ಕೆಲವು ಹೇಳಿಕೆಗಳನ್ನು ಹಿಲರಿ ಉಲ್ಲೇಖಿಸಿದರು.
‘‘ಇಂಥ ನಿಲುವುಗಳು ಅಪಾಯಕಾರಿ’’ ಎಂದು ಅವರು ಬಣ್ಣಿಸಿದರು.







