ಸೌದಿ ಮಾಲಕನಿಂದ ಮಗಳಿಗೆ ಹಿಂಸೆ: ಹಿಂದಕ್ಕೆ ಕರೆಸಿಕೊಡುವಂತೆ ತಂದೆಯ ಒತ್ತಾಯ
ದೂರು ದಾಖಲು

ಚಿಕ್ಕಮಗಳೂರು, ಮೇ 20: ಸೌದಿ ಅರೇಬಿಯಾದ ಮೆಕ್ಕಾ ನಗರಕ್ಕೆ ಮದ್ಯವರ್ತಿಯೋರ್ವರ ಮೂಲಕ ಕೆಲಸದ ನಿಮಿತ್ತ ತೆರಳಿದ್ದ ತನ್ನ ಮಗಳನ್ನು ಹಿಂದಕ್ಕೆ ಕರೆಸಿಕೊಂಡು ಮಗಳ ಹಿಂಸೆಗೆ ಕಾರಣರಾದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿ ನಗರದ ಟಿಪ್ಪು ನಗರದ ನಿವಾಸಿ ಸೈಯದ್ ಅಹ್ಮದ್ ಎಂಬವರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.
ತಮ್ಮ ಮಗಳು ನಾಝೀಮಾ ಫರ್ವೀನ್(34) ಎಂಬಾಕೆಯನ್ನು 2015ರ ಜುಲೈ 15ರಂದು ಸೌದಿ ಅರೇಬಿಯಾದ ಮೆಕ್ಕಾ ನಗರಕ್ಕೆ ಕಳುಹಿಸಲಾಗಿತ್ತು. 1,200 ರೀಯಾಲ್ ಮಾಸಿಕ ಸಂಬಂಳ ನಿರ್ಧರಿಸಿ ಬೆಂಗಳೂರಿನ ಏಜೆಂಟ್ ಫಹೀಮ್ ಎಂಬಾತ ಆಕೆ ಅಲ್ಲಿಗೆ ತೆರಳಲು ಮದ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದ.
ಆತ ತಮ್ಮ ಮಗಳನ್ನು ಸೌದಿ ಅರೇಬಿಯಾದ ಪ್ರಜೆಯೋರ್ವರ ಬಳಿ ಗುಲಾಮ ಗಿರಿಗೆ ಸೇರಿಸಿದ್ದಾನೆ. ಆರಂಭದ ಮೂರು ತಿಂಗಳು ಯಾವುದೇ ಅಭ್ಯಂತರವೂ ಇಲ್ಲದೆ ಕೆಲಸ ಮಾಡುತ್ತಿದ್ದ ಮಗಳು ನಾಝೀಮಾ ಫರ್ವೀನ್‌ಳಿಗೆ ಕಳೆದ ತಿಂಗಳಿನಿಂದ ಮಾಲಕ ಹೊಡೆದು ಬಡಿದು ಹಿಂಸಿಸತೊಡಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ನಾವು ಮಾಲಕರನ್ನು ಸಂಪರ್ಕಿಸಿ ಮಗಳನ್ನು ಹಿಂದಕ್ಕೆ ಕಳಿಸಿಕೊಡುವಂತೆ ಹೇಳಿದರೆ, ಆತನು ತಾನು ಬೆಂಗಳೂರಿನ ಫಯೀಮ್‌ನಿಗೆ 3.50 ಲಕ್ಷ ರೂ. ನೀಡಿ ಆಕೆಯನ್ನು ಕರೆಸಿಕೊಂಡಿದ್ದೇನೆ. ಆತನಿಗೆ ನೀಡಿರುವ 3.50 ಲಕ್ಷ ರೂ. ಹಣವನ್ನು ತನಗೆ ಕೊಟ್ಟರೆ ಆಕೆಯನ್ನು ಹಿಂದಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದಾನೆ. ಆದ್ದರಿಂದ ಈ ಇಬ್ಬರ ಮೇಲೆ ಕಾನೂನಾತ್ಮಕ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಜರಗಿಸುವ ಮೂಲಕ ತಮ್ಮ ಮಗಳನ್ನು ಸೌದಿ ಅರೇಬಿಯಾದಿಂದ ಹಿಂದಕ್ಕೆ ಕರೆಸಿಕೊಡುವಂತೆ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.







