ನ್ಯೂನತೆಗಳನ್ನು ಸರಿಪಡಿಸಿ: ಸಿಇಒ
ಗಿರಿಜನ ಹಾಡಿಗಳಿಗೆ ಭೇಟಿ

ಮಡಿಕೇರಿ, ಮೇ 20: ಆಗಸ್ಟ್ ಅಂತ್ಯಕ್ಕೆ ಕೊಡಗು ಜಿಲ್ಲೆಯನ್ನು ಸಂಪೂರ್ಣ ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಯಶಸ್ವಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸನ್ನದ್ಧರಾಗಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಕರೆ ನೀಡಿದ್ದಾರೆ.
ತಿತಿಮತಿ, ದೇವರಪುರ, ಚೆನ್ನಯ್ಯನಕೋಟೆ ಗ್ರಾಪಂಗಳಿಗೆ ಭೇಟಿ ನೀಡಿದ ಅವರು ಶೌಚಾಲಯ ರಹಿತ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದರು. ಈಗಾಗಲೇ ಗ್ರಾಪಂಗಳು ರೂಪಿಸಿಕೊಂಡಿರುವ ಕ್ರಿಯಾ ಯೋಜನೆಯ ಪ್ರಕಾರ ಗುರಿ ಸಾಧಿಸುವಂತೆ ಚಾರುಲತಾ ಸೋಮಲ್ ಸಲಹೆ ನೀಡಿದರು. ಮೊದಲ ಹಂತದಲ್ಲಿ ಶೌಚಾಲಯ ರಹಿತ ಕುಟುಂಬಗಳ ಕ್ಯಾಟ್ ಮಾದರಿ ಸಮೀಕ್ಷೆಯಲ್ಲಿ ವಾರ್ಡ್ ಮಟ್ಟದಲ್ಲಿ ಗ್ರಾಪಂ ಸದಸ್ಯರ ಮುಂದಾಳತ್ವದಲ್ಲಿ ತಂಡ ರಚಿಸಿಕೊಂಡು ಶೌಚಾಲಯ ಇಲ್ಲದ ಕುಟುಂಬಗಳ ಮಾಹಿತಿ ಪಡೆಯಲಾಯಿತು. ಈ ಪ್ರಕ್ರಿಯೆ ಪೂರ್ಣಗೊಂಡಿದ್ದು, ವೀರಾಜಪೇಟೆ ತಾಲೂಕಿನ 38 ಗ್ರಾಪಂಗಳ ಪೈಕಿ 8 ಗ್ರಾಪಂಗಳು ಸಂಪೂರ್ಣ ಬಯಲು ಮಲ ವಿಸರ್ಜನೆ ಮುಕ್ತಗೊಂಡಿದ್ದು, 22 ಗ್ರಾಪಂಗಳಲ್ಲಿ ಸಣ್ಣಪುಟ್ಟ ಗುರಿ ಸಾಧಿಸಬೇಕಾಗಿರುತ್ತದೆ. ಉಳಿದಂತೆ ಬಹುತೇಕ ಗಿರಿಜನರು ವಾಸವಿರುವ 8 ಗ್ರಾಪಂಗಳಲ್ಲಿ ಶೌಚಾಲಯ ರಹಿತರ ಸಂಖ್ಯೆ ಹೆಚ್ಚಾಗಿದೆ. ಗ್ರಾಪಂ ಸದಸ್ಯರೊಂದಿಗೆ ಪ್ರಗತಿಯ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ ಶೌಚಾಲಯ ನಿರ್ಮಾಣ ಮಾಡಲು ಕಠಿಣ ಇರುವ, ರಸ್ತೆ ಸಂಪರ್ಕ ಇಲ್ಲದ, ರಾಷ್ಟ್ರೀಯ ಉದ್ಯಾನವನದಲ್ಲಿ ಬರುವ ಗಿರಿಜನ ಹಾಡಿಗಳಿಗೆ ಭೇಟಿ ನೀಡಿ ಸ್ಥಳೀಯ ಗಿರಿಜನರೊಂದಿಗೆ ಚರ್ಚಿಸಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವೊಲಿಸಿದರು. ಎಲ್ಲ ನಿರ್ಮಾಣ ಕಾಮಗಾರಿಗಳು ಮಳೆಗಾಲಕ್ಕೂ ಮೊದಲೇ ನಡೆಯಬೇಕಾಗಿರುವುದರಿಂದ ಹಾಡಿಯಲ್ಲಿ ಯೋಜನೆ ರೂಪಿಸಲು ಚಾರುಲತಾ ಸೋಮಲ್ ಸಲಹೆ ನೀಡಿದರು. ತಿತಿಮತಿ ಗ್ರಾಪಂ ವ್ಯಾಪ್ತಿಗೆ ಬರುವ ಆಯಿರಸುಳಿ ಗಿರಿಜನ ಹಾಡಿಗೆ ಸುಮಾರು 4 ಕಿ.ಮೀ. ದೂರ ಕಾಲು ನಡಿಗೆ ಮೂಲಕ ತೆರಳಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವೈ.ಎಸ್.ರಾಮುರವರು ನಿರ್ಮಿಸಿಕೊಂಡಿರುವ ಶೌಚಾಲಯವನ್ನು ವೀಕ್ಷಿಸಿ ಅವರನ್ನು ಅಭಿನಂದಿಸಿದರು. ಇದೇ ಸಂದರ್ಭ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದೇವರಪುರ, ಚೆನ್ನಯ್ಯನಕೋಟೆಯ ದಯದಹಡ್ಲು, ಚೊಟ್ಟೆಪಾರೆ ಮತ್ತು ದಿಡ್ಡಳ್ಳಿ ಗಿರಿಜನ ಹಾಡಿಗಳಿಗೆ ಭೇಟಿ ನೀಡಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಮತ್ತು ಅಗಸ್ಟ್ ಅಂತ್ಯಕ್ಕೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮನವಿ ಮಾಡಿದರು.
ಮೇ 23ರಂದು ತಿತಿಮತಿ ಗ್ರಾಪಂನ ಮಜ್ಜಿಗೆಹಳ್ಳ ಆನೆ ಕ್ಯಾಂಪ್ ನಲ್ಲಿ ಸ್ವಚ್ಛಭಾರತ್ ಮಿಷನ್ ನಡಿಯಲ್ಲಿ ಶ್ರಮದಾನ ಶಿಬಿರ ನಡೆಸಲು ನಿರ್ಧರಿಸಲಾಯಿತು.





